ನೇಸರ ಎ.02: ಸಿಕ್ಕಿಂನ ಸಿಂಗ್ಟಮ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಬಂದು ವಾಸವಿದ್ದ ಯುವಕನನ್ನು ಸಿಕ್ಕಿಂ ಪೊಲೀಸರು ಕಡಬಕ್ಕೆ ಬಂದು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ ಘಟನೆ ನಿನ್ನೆ(ಎ.01) ರಾತ್ರಿ ನಡೆದಿದೆ.
ಸಿಕ್ಕಿಂ ರಾಜ್ಯದ ಸಿಂಗ್ಟಮ್ ಪೊಲೀಸ್ ಠಾಣೆಯಲ್ಲಿ ಜನವರಿ 28 ರಂದು ತಮ್ಮ ಅಪ್ರಾಪ್ತ ಬಾಲಕಿಯನ್ನು ಸಿಕ್ಕಿಂನ ಗ್ಯಾಂಗ್ಟಾಕ್ ಜಿಲ್ಲೆಯ ಸುಶೀಲ್ ಎಂಬಾತ ಅಪಹರಿಸಿರುವ ಬಗ್ಗೆ ನಾರ್ತ್ ಗ್ಯಾರೋ ಹಿಲ್ಸ್, ಮೇಘಾಲಯದ ಬಾಲಕಿಯ ಪೋಷಕರು ಭಾರತೀಯ ದಂಡ ಸಂಹಿತೆ 363 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಸಿಕ್ಕಿಂ ಪೊಲೀಸರಿಗೆ ಬಾಲಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣೆಗೆ ಆಗಮಿಸಿದ ಸಿಕ್ಕಿಂ ಪೊಲೀಸ್ ಮಹಿಳಾ ಇನ್ಸ್ ಪೆಕ್ಟರ್ ಶಿಲೋಶನ ಶರ್ಮಾ ನೇತೃತ್ವದ ಪೊಲೀಸರ ತಂಡ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮನಾಯ್ಕ್ ಅವರ ಸಹಕಾರದೊಂದಿಗೆ ಕಡಬದ ಕುಂತೂರು ಎಂಬಲ್ಲಿ ಬಾಲಕಿಯನ್ನು ಪತ್ತೆಹಚ್ಚಿ, ರಕ್ಷಣೆ ಮಾಡಿ ಬಾಲಕಿಯನ್ನು ಕರೆದುಕೊಂಡು ಬಂದ ಸುಶೀಲ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಯುವಕನು ಆಲಂಕಾರು ಎಂಬಲ್ಲಿ ಹೋಟೆಲ್ ಒಂದರಲ್ಲಿ ಫಾಸ್ಟ್ ಫುಡ್ ಕೆಲಸ ಮಾಡುತ್ತಿದ್ದ,ಇವರಿಬ್ಬರು ಸುಳ್ಳು ಹೆಸರುಗಳು ಹೇಳಿ ಇಲ್ಲಿ ವಾಸವಾಗಿದ್ದರು.ಇವರನ್ನು ಇಬ್ಬರನ್ನೂ ಪೊಲೀಸರು ಸಿಕ್ಕಿಂಗೆ ಕರೆದುಕೊಂಡು ಹೋಗಿದ್ದಾರೆ.
ಈ ಜೋಡಿ ಸಮರ್ಪಕ ಮಾಹಿತಿ ನೀಡದೆ ಕೆಲಸಕ್ಕೆ ಸೇರಿಕೊಂಡಿದೆ. ಜೋಯಿ ಹಾಗೂ ಮಾಯ ಎಂದು ಪರಿಚಯಿಸಿಕೊಂಡಿದ್ದು, ಯುವಕ ಬೆಂಗಳೂರು ಮೂಲದವನು ಹಾಗೂ ಹುಡುಗಿ ಕೋಲ್ಕತ್ತಾದವಳು ನಾವು ದಂಪತಿಗಳು ಎಂದು ತಿಳಿಸಿ ಮಾಲೀಕರಿಂದ ಕೆಲಸ ಪಡೆದು ಕೊಂಡಿದ್ದರು. ಹಾಗೂ ಯಾವುದೇ ದಾಖಲೆ ಪತ್ರಗಳನ್ನು ನೀಡದೆ ಕುಂತೂರು ಕೋಚಕಟ್ಟೆಯಲ್ಲಿ ವಾಸ್ತವ್ಯಕ್ಕೆ ಕೊಠಡಿ ಬಾಡಿಗೆ ಪಡೆದುಕೊಂಡಿದ್ದರು.
ಸಮರ್ಪಕ ದಾಖಲೆ ಪತ್ರಗಳನ್ನು ಪಡೆಯದೆ ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಹಾಗೂ ವಾಸ್ತವ್ಯಕ್ಕೆ ಕೊಠಡಿ ಬಾಡಿಗೆಗೆ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಅಪರಿಚಿತರು ಯಾವುದಾದರು ಆಹಿತರ ಘಟನೆಗೆ ಕಾರಣಕರ್ತರಾದರೆ ಯಾರು ಹೊಣೆ. ಈ ಬಗ್ಗೆ ಪೊಲೀಸರು ಕೆಲಸ ನೀಡುವ ಅಂಗಡಿ ಮಾಲೀಕರು ಹಾಗೂ ಕೊಠಡಿ ನೀಡುವ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.