ನೇಸರ ಎ21: ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಘಟಿಕೋತ್ಸವ ಎ.23ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.
ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ದೇವದಾಸ ಕಾಪಿಕಾಡ್, ಹರಿಕೃಷ್ಣ ಪುನರೂರು ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿ ಉಪ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಮಹಿಳೆಯರ ಸ್ಫೂರ್ತಿ ಹೇಮಾವತಿ ಹೆಗ್ಗಡೆ
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪತ್ನಿಯಾಗಿರುವ ಹೇಮಾವತಿ ಹೆಗ್ಗಡೆ ಗ್ರಾಮೀಣ ಮಹಿಳೆಯರ ಪಾಲಿಗೆ ಸ್ಫೂರ್ತಿ. ಸ್ವಸಹಾಯ ಗುಂಪುಗಳು, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. 1951ರ ಎಪ್ರಿಲ್ 2ರಂದು ಪೆರಾಡಿ ಬೀಡುವಿನಲ್ಲಿ ಹುಟ್ಟಿದ ಹೇಮಾವತಿಯವರು ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಪದವಿ ಪೂರೈಸಿದ್ದಾರೆ. 1972ರಲ್ಲಿ ಹೆಗ್ಗಡೆಯವರನ್ನು ಕೈಹಿಡಿದ ಬಳಿಕ ದೊಡ್ಡ ಜವಾಬ್ದಾರಿ ವಹಿಸಿಕೊಂಡಿದ್ದರು. 1991ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಥಾಪಕ ಟ್ರಸ್ಟಿಗಳಲ್ಲಿ ಒಬ್ಬರು. ಯೋಜನೆಯ ರೂಪುರೇಷೆ, ಬೆಳವಣಿಗೆಯ ಹಿಂದೆ ಹೇಮಾವತಿ ಹೆಗ್ಗಡೆ ಶ್ರಮ ಇದೆ. ಜ್ಞಾನ ವಿಕಾಸ ಕೇಂದ್ರ ದ ಮೂಲಕ ಮಹಿಳೆಯರ ಸಂಘಟನೆ ಮತ್ತು ಸ್ವಾ ಉದ್ಯೋಗಕ್ಕೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡುತ್ತ ಬಂದಿದ್ದು. ಸದ್ಯ ಕರ್ನಾಟಕ ರಾಜ್ಯದಲ್ಲಿ 6 ಲಕ್ಷ ಸ್ವಸಹಾಯ ಗುಂಪುಗಳಿದ್ದು 50 ಲಕ್ಷ ಸದಸ್ಯರಿದ್ದಾರೆ. ಇದಲ್ಲದೆ, ಧರ್ಮಸ್ಥಳಕ್ಕೆ ಸಂಬಂಧಪಟ್ಟ ಹಲವು ಟ್ರಸ್ಟ್, ಸೇವಾ ಯೋಜನೆಗಳಲ್ಲಿ ಹೇಮಾವತಿ ಹೆಗ್ಗಡೆ ಸಕ್ರಿಯರಾಗಿದ್ದಾರೆ.
ಕರಾವಳಿಯ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್
1964ರಲ್ಲಿ ಮಂಗಳೂರಿನ ತಾಲೂಕಿನ ಸಣ್ಣ ಊರು ಸಜಿಪದಲ್ಲಿ ಹುಟ್ಟಿದ ದೇವದಾಸ್ ಕಾಪಿಕಾಡ್ ಹೆಚ್ಚು ಓದಿದವರಲ್ಲ. ಆದರೆ ಸಣ್ಣ ವಯಸ್ಸಿನಲ್ಲಿಯೇ ನಾಟಕ ರಂಗದ ಸೆಳೆತದಿಂದಾಗಿ ತುಳು ರಂಗಭೂಮಿಯಲ್ಲಿ ನಟ, ನಿರ್ದೇಶಕನಾಗಿ ಮೇರು ಎತ್ತರಕ್ಕೇರಿದ್ದಾರೆ. 1989ರಲ್ಲಿ ಬಲೇ ಚಾ ಪರ್ಕ ಎನ್ನುವ ನಾಟಕವನ್ನು ನಿರ್ದೇಶಿಸಿ, ನಟಿಸಿದ್ದು ದೇವದಾಸ್ ಕಾಪಿಕಾಡ್ ಅವರ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಆನಂತರ ಚಾ ಪರ್ಕ ಹೆಸರಲ್ಲಿಯೇ ತಂಡ ಕಟ್ಟಿಕೊಂಡು ಎರಡು ದಶಕದಲ್ಲಿ ಸುಮಾರು 55ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಸ್ವತಃ ಬಣ್ಣ ಹಚ್ಚಿದ್ದಾರೆ. ನಾಟಕ ತಂಡದ ಮೂಲಕ ನೂರಾರು ಕಲಾವಿದರನ್ನು ಜೊತೆಗೆ ಬೆಳೆಸಿದ್ದಾರೆ. ಮುಂಬೈ, ಗಲ್ಫ್ ದೇಶಗಳಲ್ಲಿ ಸೇರಿದಂತೆ ಎಂಟು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನ ಮಾಡಿದ್ದಾರೆ. 2010ರ ಬಳಿಕ ಸಿನಿಮಾದತ್ತ ಒಲವು ತೋರಿದ ಕಾಪಿಕಾಡ್, ಹಲವು ತುಳು ಚಿತ್ರಗಳನ್ನು ಸ್ವಂತ ಬ್ಯಾನರಿನಲ್ಲಿ ನಿರ್ದೇಶಿಸಿದ್ದಾರೆ. ದೇವದಾಸ್ ಕಾಪಿಕಾಡ್ ಅವರು ರಂಗಭೂಮಿ ಮತ್ತು ಸಿನಿಮಾದಲ್ಲಿ ಎಲ್ಲ ಪ್ರಕಾರದಲ್ಲೂ ಕೈಯಾಡಿಸಿದ್ದಾರೆ. ನಟನೆ, ನಿರ್ದೇಶನ, ಗೀತ ರಚನೆ, ಗಾಯನ, ಕಥೆ, ಸಂಭಾಷಣೆ, ನಿರ್ಮಾಣ ಹೀಗೆ ಎಲ್ಲದರಲ್ಲೂ ಕೈಯಾಡಿಸಿ ಸೈ ಎನಿಸಿದ ಅಪರೂಪದ ವ್ಯಕ್ತಿ ಇವರು.
ಸಮಾಜಸೇವೆ ಹರಿಕೃಷ್ಣ ಪುನರೂರು
1943ರಲ್ಲಿ ಸಾಮಾನ್ಯ ಕೃಷಿಕ ಮನೆತನದಲ್ಲಿ ಜನಿಸಿದ ಹರಿಕೃಷ್ಣ ಪುನರೂರು ಎಸ್ಸೆಸ್ಸೆಲ್ಸಿ ಓದಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿದ್ದರು. ಶಿಕ್ಷಣ, ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನದುದ್ದಕ್ಕೂ ಸಮಾಜ ಸೇವೆಯಲ್ಲಿ ಗುರುತಿಸಿದ್ದಾರೆ. ಮೊದಲ ಬಾರಿಗೆ 1961ರಲ್ಲಿ ಪುನರೂರಿನಲ್ಲಿ ರಾತ್ರಿ ಶಾಲೆ ಆರಂಭಿಸಿ ತನ್ನ ಊರಿನ ಜನರಿಗೆ ಶಿಕ್ಷಣ ದೊರೆಯುವಂತೆ ಮಾಡಿದ್ದರು. ಕೆಂಚನಕೆರೆಯಲ್ಲಿ ಸ್ವತಃ ಮುತುವರ್ಜಿ ವಹಿಸಿ ಶಾಲೆ ಸ್ಥಾಪಿಸಿ, 1992ರಲ್ಲಿ ಅದನ್ನು ಸರಕಾರಕ್ಕೆ ಬಿಟ್ಟುಕೊಟ್ಟಿದ್ದರು. ಮುಲ್ಕಿಯಲ್ಲಿ ರಾಮಕೃಷ್ಣ ಪೂಂಜಾ ಐಟಿಐ, ವಿಜಯಾ ಕಾಲೇಜಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗಲೂ ಮುಲ್ಕಿ ಭಾಗದಲ್ಲಿ ಹಲವು ಶಾಲೆಗಳನ್ನು ದತ್ತು ಪಡೆದು ಅಲ್ಲಿನ ಶಿಕ್ಷಕರಿಗೆ ಸ್ವಂತ ನಿಧಿಯಿಂದ ವೇತನ ನೀಡುತ್ತಿದ್ದಾರೆ. 1990ರಿಂದ 2002ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕನ್ನಡ ಭಾಷೆಗಾಗಿ ಕೆಲಸ ಮಾಡಿದ್ದಾರೆ. 2002ರಿಂದ 2005ರ ವರೆಗೆ ಕಸಾಪ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1997ರಲ್ಲಿ ಇವರ ಉಸ್ತುವಾರಿಯಲ್ಲಿ ದಕ್ಷಿಣ ಕನ್ನಡದಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನ ನಡೆದಿತ್ತು. ಅದಲ್ಲದೆ, ಸೇವಾ ಕ್ಷೇತ್ರದಲ್ಲೂ ತೊಡಗಿಸಿದ್ದು ಹೃದಯ, ಕಿಡ್ನಿ, ಕ್ಯಾನ್ಸರ್ ಇನ್ನಿತರ ಕಾಯಿಲೆಗಳಿಂದ ಬಳಲುವ ಬಡವರಿಗಾಗಿ 1974ರಿಂದ ಪ್ರತಿವರ್ಷ 5 ಲಕ್ಷ ರೂಪಾಯಿ ನೆರವು ನೀಡುತ್ತಾ ಬಂದಿದ್ದಾರೆ. ಮೂಲ್ಕಿ, ಕಿನ್ನಿಗೋಳಿಯಲ್ಲಿ ಬಡವರಿಗಾಗಿ ಮನೆಗಳನ್ನೂ ಕಟ್ಟಿಸಿಕೊಟ್ಟು ಸಾಮಾಜಿ ಕಾರ್ಯದಲ್ಲಿ ತೊಡಗಿಸಿದ್ದಾರೆ.
–ಜಾಹೀರಾತು–