ಯಶಸ್ವಿಯಾಗಿ ಪೂರ್ಣಗೊಂಡ SDM NSS ವಾರ್ಷಿಕ ವಿಶೇಷ ಶಿಬಿರ

ಶೇರ್ ಮಾಡಿ

ನೇಸರ ಮೇ‌ 20: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಕೊಕ್ಕಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಯಿತು. ಮೇ 12ಕ್ಕೆ ಆರಂಭವಾದ ಶಿಬಿರವು ವೈವಿಧ್ಯಮಯ ಕಾರ್ಯಕ್ರಮಗಳನ್ನೊಳಗೊಂಡಿತ್ತು.
ಮೇ 18ರ ಬುಧವಾರದಂದು ಬೆಳಗ್ಗೆ 11.30 ಕ್ಕೆ ಸಮಾರೋಪ ಸಮಾರಂಭವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ
ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. “ಸತತ ಪರಿಶ್ರಮ ಹಾಗೂ ಮಾರ್ಗದರ್ಶನಗಳಿಂದ ಕೊಕ್ಕಡ ಗ್ರಾಮದಲ್ಲಿ ಉತ್ತಮ ಬದಲಾವಣೆಗಳಾಗಿವೆ. ಶಿಬಿರದ ಅಂತ್ಯದಿಂದ ನಮಗೆ ಬೇಸರವಾಗಿದೆ. ಸ್ವಯಂಸೇವಕರು ತಮ್ಮ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಧ.ಮಂ.ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎನ್.ಉದಯಚಂದ್ರ ಮಾತನಾಡಿ “ಎಲ್ಲರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿದೆ. ಸ್ವಯಂಸೇವಕರ ವ್ಯಕ್ತಿತ್ವ ಬದಲಾವಣೆಯಲ್ಲಿ ಎನ್.ಎಸ್.ಎಸ್ ನ ಪಾತ್ರ ದೊಡ್ಡದು. ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದಿಂದ ಶಿಬಿರಾರ್ಥಿಗಳಿಗೆ ಮಧ್ಯಾಹ್ನದ ಭೋಜನ ದೊರೆತಿದ್ದು ಪುಣ್ಯ” ಎಂದು ಹೇಳಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತು. ಕೊಕ್ಕಡ ಶಾಲೆಯ ಅಭಿವೃದ್ಧಿಗಾಗಿ ಎನ್.ಎಸ್.ಎಸ್ ಘಟಕದಿಂದ ಸಹಾಯಧನ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಉಪಪ್ರಾಂಶುಪಾಲ ರಾದ ಡಾ.ಎ.ಜಯಕುಮಾರ್ ಶೆಟ್ಟಿ, ಕೊಕ್ಕಡ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಪ್ರಗತಿಪರ ಕೃಷಿಕರಾದ ತುಕ್ರಪ್ಪ ಶೆಟ್ಟಿ ನೂಜೆ, ಕೊಕ್ಕಡ ಸಿ.ಆರ್.ಪಿ ವಿಲ್ಫ್ರೆಡ್ ಪಿಂಟೋ, ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಶ್ವೇತಾ, ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ಸ್ವಯಂಸೇವಕ, ರಾಜ್ಯಪ್ರಶಸ್ತಿ ವಿಜೇತ ಪ್ರಶಾಂತ್ ಸಿ.ಎಚ್, ಕೊಕ್ಕಡ ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಉಪಸ್ಥಿತರಿದ್ದರು.

ಸನ್ಮಾನ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರನ್ನು ಹಾಗೂ ಎನ್ಎಸ್ಎಸ್ ನ ಯೋಜನಾಧಿಕಾರಿ ಗಳನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ. ಎಸ್ ಸ್ವಾಗತಿಸಿ, ಶ್ರೀಮತಿ ದೀಪಾ ಆರ್. ಪಿ ವಂದಿಸಿದರು. ಸ್ವಯಂಸೇವಕಿ ಜ್ಯೋತಿಕಾ ನಿರೂಪಣೆ ಮಾಡಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!