ನೇಸರ ಮೇ.23: ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ (66 ವ) ಅವರು ಮೇ.22ರ ರಾತ್ರಿ ಸಿಂಗಾಪುರದಲ್ಲಿ ನಿಧನರಾದರು.
ಅಲ್ಪ ಕಾಲದ ಅನಾರೋಗ್ಯದ ಕಾರಣದಿಂದ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ಧ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿ 23 ವರ್ಷ ಅವರು ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿ, ಸೇವೆ ಸಲ್ಲಿಸುತ್ತಿದ್ದರು, ಉಜಿರೆಯಂತಹ ಪುಟ್ಟ ಹಳ್ಳಿಯಲ್ಲಿ ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದವರಲ್ಲಿ ಪ್ರಮುಖರಾದ ಇವರು ನ್ಯಾಕ್ ಸಂಸ್ಥೆಯಿಂದ ಸತತ 3 ಬಾರಿ ಕಾಲೇಜಿಗೆ “ಎ” ಗ್ರೇಡ್ ಮಾನ್ಯತೆ ಗಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಭೀರ ನಡೆಯ ಪ್ರಿನ್ಸಿ :
ಕಾಲೇಜು ಪ್ರಾಂಶುಪಾಲರಾಗಿದ್ದ ಡಾ.ಬಿ,ಯಶೋವರ್ಮರವರು ಪ್ರಾಂಶುಪಾಲ ಹೆಸರಿಗೆ ಕಲಶಪ್ರಾಯರಾಗಿದ್ದರು. ಎರಡೂ ಕೈಯನ್ನು ಹಿಂದೆ ಕಟ್ಟಿ, ಕಾಲೇಜು ಕಾರಿಡಾರ್ ಸುತ್ತ ಸದ್ದಿಲ್ಲದ ಗಂಭೀರ ಹೆಜ್ಜೆ ಹಾಕುತ್ತಿದ್ದಾಗ ವಿದ್ಯಾರ್ಥಿಗಳು ತನ್ಮಯರಾಗುತ್ತಿದ್ದರು. ಅದ್ಭುತ ಪಾಂಡಿತ್ಯ ಹೊಂದಿದ್ದ, ಇವರು ಮಿತಭಾಷಿಯಾಗಿದ್ದರು. ಅವರ ದೂರದೃಷ್ಟಿತ್ವ, ಸೌಮ್ಯವಾದ ಮಾತುಗಳು, ಶಿಸ್ತು, ಗಂಭೀರ ನೋಟ ವಿದ್ಯಾರ್ಥಗಳಿಗೆ ಅವರ ಮೇಲೆ ಗೌರವ, ಭಯ ಹೆಚ್ಚಿಸುವಂತಿತ್ತು. ಅದ್ಬುತ ವ್ಯಕ್ತಿತ್ವ ಹೊಂದಿದ್ದ ಅವರನ್ನು ಕಣ್ತುಂಬಿಸಿಕೊಳ್ಳುವುದೇ ವಿದ್ಯಾರ್ಥಿಗಳಿಗೆ ಖುಷಿ. ಪ್ರತಿಯೊಂದು ವರ್ತಮಾನಗಳ ಬಗ್ಗೆ ಆಸಕ್ತಿಹೊಂದಿದ್ದ ಇವರ ಅಕಾಲಿಕ ಮರಣ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ತುಂಬಲಾರದ ನಷ್ಟ.
ಸಂಘ ಸಂಸ್ಥೆಗಳಲ್ಲೂ ಸೇವೆ:
ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಲವಾರು ಸಮ್ಮೇಳನಗಳನ್ನು ನಡೆಸಿದ್ದರು. ಜೇಸಿಐ, ರೋಟರಿ ಕ್ಲಬ್ ಮುಂತಾದ ಹಲವಾರು ಸಂಸ್ಥೆಗಳಲ್ಲಿ ತನ್ನನ್ನು ನಾನು ತೊಡಗಿಸಿಕೊಂಡಿದ್ದರು.
ಮೃತರು ಬಾವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸಹೋದರಿ ಹೇಮಾವತಿ ವಿ ಹೆಗ್ಗಡೆ, ಪತ್ನಿ ಸೋನಿಯಾ, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ಬಳಗ ಬಳಗದವರನ್ನು, ಶಿಷ್ಯರನ್ನು ಅಗಲಿದ್ದಾರೆ.
ಜಾಹೀರಾತು