ವಿದ್ಯಾರ್ಥಿಗಳ ಮನಸ್ಸನ್ನು ಹಿಡಿತದಲ್ಲಿಡಲು ಸಂಗೀತ ಸಹಾಯವಾಗುತ್ತದೆ – ಗಿರೀಶ್ ಹೆಗಡೆ, ಧರ್ಮಸ್ಥಳ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ.
ಮನಸ್ಸಿನ ಏಕಾಗ್ರತೆಗೆ ಸಂಗೀತ ಉತ್ತಮ ಔಷಧ – ಶ್ರೀಮತಿ ಪರಿಮಳ ಎಂ.ವಿ., ಶಾಲಾ ಮುಖ್ಯೋಪಾಧ್ಯಾಯಿನಿ
ನೇಸರ ಜೂ.22: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶ್ವ ಸಂಗೀತ ದಿನದ ಪ್ರಯುಕ್ತ ಗಾನ ಸಂಭ್ರಮ ಆಚರಿಸಲಾಯಿತು.
ಕಾರ್ಯಕ್ರಮವನ್ನು ಧರ್ಮಸ್ಥಳ ಯಕ್ಷಗಾನ ಮಂಡಳಿಯ ವ್ಯವಸ್ಥಾಪರಾದ ಗಿರೀಶ್ ಹೆಗಡೆ ಸಂಗೀತದ ಪಕ್ಕಾ ವಾದ್ಯ ತಬಲಾಕ್ಕೆ ಹೂ ಅರ್ಪಿಸಿ ನುಡಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಚಿಕ್ಕ ಮಗುವಿನಿಂದ ಹಿಡಿದು ಎಲ್ಲರಿಗೂ ಪ್ರಿಯವಾದದ್ದು ಸಂಗೀತ. ಸಂಗೀತಕ್ಕೆ ಒಂದು ಆಗಾಧ ಶಕ್ತಿ ಇದೆ. ಹಳೆಯ ಸಂಗೀತ ಹಾಡು ಮನಕ್ಕೆ ಮುದನೀಡುತ್ತದೆ. ಸಂಗೀತದ ಸುಧೆ ಹರಿಸಿದಾಗ ಮನಸ್ಸು ಜಾಗೃತಗೊಳ್ಳುತ್ತದೆ ಹೀಗಾಗಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನಸ್ಸನ್ನು ಹಿಡಿತದಲ್ಲಿಡಲು ಸಹಾಯವಾಗುತ್ತದೆ ಎಂದು ನುಡಿದರು. ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ., ಸಂಗೀತದ ಸಾಮರ್ಥ್ಯ ಹೇಗೆ ಎಂದರೆ ಮಾನಸಿಕ ಖಿನ್ನತೆ ಹೊಂದಿದ ವ್ಯಕ್ತಿಯ ಮನಸ್ಸು ಸಹ ಒಮ್ಮೆ ಮುದಗೊಳಿಸುವ ಶಕ್ತಿ ಇದೆ. ಸಂಗೀತ ಕಲಿಯಲು ಯಾವುದೇ ಎಲ್ಲೆಗಳಿಲ್ಲ. ಮನಸ್ಸಿನ ಏಕಾಗ್ರತೆಗೆ ಇದೊಂದು ಉತ್ತಮ ಔಷಧ. ಬಾಲ್ಯದಲ್ಲಿ ನಾವು ಕಲಿತ ಹಾಡುಗಳನ್ನು ಎಂದಿಗೂ ಮರೆಯಲಾರೆವು. ಶಾಲೆಯಲ್ಲಿ ಕಲಿಸುವ ಹಾಡುಗಳನ್ನು ಗಮನವಿಟ್ಟು ಆಲಿಸಿ ಕಲಿಯಿರಿ. ಅದರ ಅರ್ಥ ಅರಿಯಿರಿ. ಅನೇಕ ಸಂಗೀತ ಕಾರ್ಯಕ್ರಮಗಳಿಗೆ ಭಾಗವಹಿಸಿ. ನಿಮಗೆ ಅದು ಓದಿಗೂ ಸಹಾಯ ಮಾಡುತ್ತದೆ ಎಂದು ನುಡಿದರು.
ವಿಧ್ಯಾರ್ಥಿಗಳಿಂದ ಜಾನಪದ, ಭಕ್ತಿಗೀತೆ, ಸಿನಿಮಾ ಹಾಡು , ಭಾವಗೀತೆ, ಶಾಸ್ತ್ರೀಯ ಸಂಗೀತ ಸಂಭ್ರಮದ ಗಾನಸಂಭ್ರಮ ನಡೆಯಿತು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಂಗೀತದ ಸುಧೆಯಲ್ಲಿ ಮಿಂದು ಪುನೀತರಾದರು. ಶಾಲಾ ಸಾಂಸ್ಕೃತಿಕ ಮಂತ್ರಿಯಾದ ಕುಮಾರಿ ಅನ್ವಿತ ನಡೆಸಿದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿರುವ ಕುಮಾರಿ ಸ್ಪೂರ್ತಿ ಸ್ವಾಗತಿಸಿ ಕಿರುಪರಿಚಯಿಸಿದರು. ಕುಮಾರಿ ಪ್ರಣಿತಾ ವಂದಿಸಿದರು.