ನೇಸರ ಜೂ.26: ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಮುಂಡಾಜೆ ಇದರ ವತಿಯಿಂದ ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್ ಮುಂಡಾಜೆ, ಭಿಡೆ ಮೆಡಿಕಲ್ಸ್ ಹಾಗೂ ದಾನಿಗಳ ಸಹಕಾರದೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ಭಾನುವಾರ ಜರಗಿತು.
ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶ್ರಫ್ ಆಲಿ ಕುಂಞ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಜಿತ್ ಎಂ.ಭಿಡೆ ಮಾತನಾಡಿ, ಮುಂದಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ತಾಂತ್ರಿಕತೆಯ ಉಪಯೋಗ ಪಡೆಯುವ ಜತೆ ಸಾಮಾನ್ಯ ವಿಚಾರಗಳ ಅರಿವು ಮೂಡಿಸಿ ಕೊಳ್ಳಬೇಕು, ಇದರಿಂದ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ. ಹಿರಿಯರನ್ನು ಗೌರವದಿಂದ ಕಂಡರೆ ಮನ್ನಣೆ ಸಿಗುತ್ತದೆ ಎಂದು ಹೇಳಿದರು.
ಅನಂತ ಫಡ್ಕೆ ಮೆಮೋರಿಯಲ್ ಟ್ರಸ್ಟ್ ಸಂಚಾಲಕ ಪ್ರಹ್ಲಾದ್ ಫಡ್ಕೆ, ಉದ್ಯಮಿ ಶಮಂತ್ ಕುಮಾರ್ ಜೈನ್, ವೈದ್ಯ ಡಾ.ಶಿವಾನಂದ ಸ್ವಾಮಿ, ಕೃಷಿಕರಾದ ರಾಮಚಂದ್ರ ಭಟ್ ಅರೆಕಲ್ಲು, ತುಕಾರಾಮ ಬಂಗೇರ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷ ಶೀನಪ್ಪ ಗೌಡ ಸ್ವಾಗತಿಸಿದರು. ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಶಿಧರ ಠೋಸರ್ ವಂದಿಸಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಿಧಿ ವಿತರಿಸಲಾಯಿತು.
ಅಧ್ಯಕ್ಷ ಅಶ್ರಫ್ ಅಲಿ ಕುಂಞಿ ಅವರು ತಮ್ಮ ಮಕ್ಕಳ ಜನ್ಮದಿನದ ಅಂಗವಾಗಿ ಮುಂಡಾಜೆ ಸರಕಾರಿ ಶಾಲೆಯ 10 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.