ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಪ್ರವಾಸಿಗರ ಮೋಜು-ಮಸ್ತಿ: ಸುಗಮ ಸಂಚಾರಕ್ಕೆ ಅಡ್ಡಿ

ಶೇರ್ ಮಾಡಿ

ನೇಸರ ಜೂ.26: ಕಣ್ಮನ ಸೆಳೆಯುವ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಇರುವ ತೊರೆಗಳು, ಜಲಪಾತಗಳು ಮಳೆ ಆರಂಭವಾದ ಕಾರಣ ಸೊಬಗನ್ನು ತೆರೆದುಕೊಳ್ಳ ತೊಡಗಿವೆ. ಇದರ ಬೆನ್ನಲ್ಲೇ ಪ್ರವಾಸಿಗರು ಇಲ್ಲಿ ಮೋಜು-ಮಸ್ತಿ ಗಳನ್ನು ಮಾಡುತ್ತಾ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಜತೆಗೆ ಇತರ ವಾಹನಗಳ ಸುಗಮ ಸಂಚಾರಕ್ಕೂ ಸಾಕಷ್ಟು ಅಡ್ಡಿ ಉಂಟು ಮಾಡುತ್ತಿದ್ದಾರೆ.

ಘಾಟಿ ಪ್ರದೇಶದ ಸೌಂದರ್ಯ ವೀಕ್ಷಣೆಗೆ ಮಾತ್ರ ಸೀಮಿತ ಎಂಬುದನ್ನು ಅರಿಯದ ಪ್ರವಾಸಿಗರು ಇಲ್ಲಿನ ಜಲಪಾತ, ಬಂಡೆಗಳನ್ನು ಏರಿ ಇಳಿಯುತ್ತಾ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಭಾನುವಾರ ಜಲಪಾತ ಪ್ರದೇಶದಲ್ಲಿ ರಸ್ತೆ ಮಧ್ಯೆಯೇ ವಾಹನಗಳನ್ನು ನಿಲ್ಲಿಸಿ ಜಲಪಾತ ಪರಿಸರದ ಅಪಾಯಕಾರಿ ಸ್ಥಳದಲ್ಲಿ ಕಲ್ಲುಬಂಡೆಗಳನ್ನು ಏರುವುದು, ಅಲ್ಲಿಂದ ಸೆಲ್ಫಿ ಗಳನ್ನು ಕ್ಲಿಕ್ಕಿಸುವುದು ಇತ್ಯಾದಿ ಅನಗತ್ಯ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಿದೆ. ಇಂತಹ ಚಟುವಟಿಕೆಗಳು ಘಾಟಿ ಪ್ರದೇಶದಲ್ಲಿ ಇಂದಿನ ದಿನಗಳಲ್ಲಿ ನಿರಂತರ ನಡೆಯುತ್ತಿದೆ. ತಡೆಗೋಡೆಗಳನ್ನು ಹತ್ತುವುದು, ಆಳವಾದ ತೊರೆಗಳಲ್ಲಿ ಇಳಿಯುವುದು, ಇತ್ಯಾದಿಗಳಿಂದಲೂ ಪ್ರವಾಸಿಗರು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಯುವಕನೋರ್ವ ಜಲಪಾತ ಏರಲು ಹೋಗಿ ಅಲ್ಲಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜರುಗಿದೆ. ಇಂತಹ ಚಟುವಟಿಕೆಗಳಿಂದ ಹಲವು ಪ್ರವಾಸಿಗರು ಆಗಾಗ ಸಣ್ಣಪುಟ್ಟ ಅಪಾಯಗಳಿಗೆ ಒಳಗಾಗುತ್ತಿದ್ದಾರೆ. ಆದರೂ ಮತ್ತೆ ಮತ್ತೆ ಅನಗತ್ಯ ಮೋಜು ನಡೆಯುತ್ತಲೇ ಇದೆ.

ಘಾಟಿ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿ ವೀಕ್ಷಣೆ ಮಾಡುವುದಕ್ಕೆ ನಿರ್ಬಂಧವಿದೆ. ಆದರೆ ಪ್ರವಾಸಿಗರು ಇದನ್ನು ಲೆಕ್ಕಿಸುತ್ತಿಲ್ಲ.
ವೀಕ್ಷಣೆ ನೆಪದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಮದ್ಯಪಾನ, ಆಹಾರ ಸೇವನೆ ಬಳಿಕ ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆಯುವುದು ಕಂಡುಬರುತ್ತಿದೆ. ರಸ್ತೆ ಬದಿ ಸಿಗುವ ವನ್ಯಮೃಗಗಳಿಗೆ ಉಪಟಳ ನೀಡುವವರು ಇದ್ದಾರೆ. ಸುಂದರವಾದ ಘಾಟಿ ಪ್ರದೇಶ ಕೆಲವು ಪ್ರವಾಸಿಗರ ಅನಗತ್ಯ ಕೃತ್ಯಗಳಿಂದ ಮಲಿನಗೊಳ್ಳುತ್ತಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಬಲವಾದ ಕಡಿವಾಣ ಹಾಕುವ ಅಗತ್ಯವಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!