ನೇಸರ ಜೂ.27: ಉದಯೋನ್ಮುಖ ಕಲಾವಿದರನ್ನು ಸೃಷ್ಟಿಸಿ ಅವರಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಉಜಿರೆಯಲ್ಲಿ ಪ್ರಾರಂಭಗೊಂಡ “ಯಕ್ಷಜನಸಭಾ” ಮೂಲಕ ತಾಲೂಕಿನಲ್ಲಿ ಅನೇಕ ಹಿಮ್ಮೇಳ, ಮುಮ್ಮೇಳ ಕಲಾವಿದರು ಮೂಡಿಬಂದಿದ್ದಾರೆ. ತುಳುನಾಡು ದೈವಾರಾಧನೆಯ ಕೇಂದ್ರವಾಗಿ ಯಕ್ಷಗಾನ ಕಲೆ ಶತ ಶತಮಾನಗಳಿಂದ ಬೆಳೆದುಬಂದಿದೆ. ಜಿಲ್ಲೆಯಲ್ಲಿ ಯಕ್ಷಗಾನ ಕಲಾವಿದರು, ಸಂಘಟಕರು ಹಾಗು ಅಪಾರ ಅಭಿಮಾನಿಗಳಿದ್ದಾರೆ. ಹಿಂದೂ ಸಮಾಜ ಎಚ್ಛೆತ್ತುಕೊಳ್ಳುವ ಶುದ್ಧ ಕಲೆಯನ್ನು ಬೆಳೆಸುವ, ಕಲೆಯ ವಿವಿಧ ಪ್ರಕಾರವನ್ನೂ ಆರಾಧಿಸುವ ಕಾರ್ಯ ತಾಲೂಕಿನಲ್ಲಿ ನಿರಂತರ ನಡೆದುಕೊಂಡು ಬರುತ್ತಿದೆ. ಯಕ್ಷಗಾನ ಕಲೆ ಪೌರಾಣಿಕ ಜ್ಞಾನವನ್ನು ಉಣಬಡಿಸುವ ಪ್ರೀತಿಯ ಕಲೆ. ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಶಿಷ್ಯೋತ್ತಮರನ್ನು ಕೊಟ್ಟ ತಾಲೂಕಿನಲ್ಲಿ ಇನ್ನಷ್ಟು ಕಲಾವಿದರು ಮೂಡಿ ಬರಲಿ ಎಂದು ಉಜಿರೆಯ ಖ್ಯಾತ ದಂತ ವೈದ್ಯ ಹಾಗು ಯಕ್ಷಜನ ಸಭಾ ಅಧ್ಯಕ್ಷ ಡಾ.ಎಂ.ಎಂ.ದಯಾಕರ್ ನುಡಿದರು. ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನ ಹಾಗು ಯಕ್ಷಜನ ಸಭಾ ವತಿಯಿಂದ ನಡೆದ 4 ದಿನಗಳ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಸಮಾರೋಪ ಹಾಗೂ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಜನ ಸಭಾ ವತಿಯಿಂದ ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರನ್ನು ಗೌರವಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ, ಯಕ್ಷಗಾನ ಹಿಮ್ಮೇಳ ಕಲಾವಿದ ಜನಾರ್ದನ ತೋಳ್ಪಡಿತ್ತಾಯ ಅವರು ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರನ್ನು ಅಭಿನಂದಿಸಿ ಸ್ವತಃ ಅತ್ತ್ಯತ್ತಮ ಕಲಾವಿದರೂ, ಚೆಂಡೆವಾದಕರು, ಭಾಗವತರೂ ಆಗಿ ಬೈಪಡಿತ್ತಾಯರು ಪುರಾಣದ ಖಚಿತ ಮಾಹಿತಿ ಹೊಂದಿದ್ದು ವಿದ್ಯಾರ್ಥಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಾಳ್ಮೆ, ಪರಿಶ್ರಮದಿಂದ ಗುಣಮಟ್ಟದ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ್ದಾರೆ. ಮಿತಭಾಷಿಯಾಗಿ ತನ್ನ ಕಲಾಸಿದ್ಧಿಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದಿದ್ದಾರೆ. ಅವರ ಕಲಾಸೇವೆ ನಿರಂತರವಾಗಿ ನಡೆದು ಮತ್ತಷ್ಟು ಕಲಾವಿದರು ಸೃಷ್ಟಿಯಾಗಲಿ ಎಂದು ನುಡಿದರು. ಯಕ್ಷಜನಸಭಾ ಸಂಚಾಲಕ ವೆಂಕಟ್ರಮಣ ರಾವ್ ಸ್ವಾಗತಿಸಿ, ಪ್ರಸ್ತಾವಿಸಿದರು. ದಿನೇಶ್ ರಾವ್ ಬಳ್ಳಮಂಜ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಡಾ.ಜಿ.ಪಿ.ಹೆಗ್ಡೆ ವಂದಿಸಿದರು. ಹಿರಿಯ ಯಕ್ಷಗಾನ ಕಲಾವಿದರಿಂದ “ನರಕಾಸುರ ಮೋಕ್ಷ” ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಹಾಡುಗಾರಿಕೆಯಲ್ಲಿ ವೆಂಕಟ್ರಮಣ ರಾವ್ ಹಾಗು ಶ್ರೀವಿದ್ಯಾ ಐತಾಳ್, ಹಿಮ್ಮೇಳದಲ್ಲಿ ಜನಾರ್ದನ ತೋಳ್ಪಡಿತ್ತಾಯ, ರಾಮಪ್ರಕಾಶ್ ಕಲ್ಲೂರಾಯ, ಶ್ರೇಯಸ್ ಪಾಳಂದೆ ಮತ್ತು ಗಣೇಶ್ ಭಟ್ ಸಹಕರಿಸಿದ್ದರು. ನಾಲ್ಕು ದಿನಗಳ ಕಾಲ ಹಿರಿಯ ಕಿರಿಯ ಅರ್ಥಧಾರಿಗಳಿಂದ ಗುರು ದಕ್ಷಿಣೆ, ಗಿರಿಜಾ ಕಲ್ಯಾಣ, ಕಚ ದೇವಯಾನಿ ಹಾಗು ಶ್ರೀದೇವಿ ಕೌಶಿಕೆ ಪೌರಾಣಿಕ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸಲ್ಪಟ್ಟಿತು.