ನೇಸರ ಜೂ.27: ನಾಗರಹಾವೊಂದು ಆಹಾರವನ್ನರಸಿ ಬಂದು ಬಟ್ಟೆಯನ್ನು ನುಂಗಿದ ಘಟನೆ ಜೂನ್ 27ರಂದು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ನಡೆದಿದೆ. ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಶೋಕ್ ಪೂಜಾರಿ ಎಂಬುವವರ ಮನೆಯ ಕೊಟ್ಟಿಗೆ ಸಮೀಪ ಕೋಳಿ ಮೊಟ್ಟೆ ಇಡುವ ಸಮಯ ಹಾಕಿದ್ದ ಬಟ್ಟೆಯನ್ನು ನಾಗರಹಾವು ನುಂಗಿದೆ. ಕೋಳಿ ಕೂಗುವ ಶಬ್ದದಿಂದ ಮನೆಯವರು ಹೊರಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮನೆಯವರು ಲಾಯಿಲಾ ಸಮೀಪದ ಸ್ನೇಕ್ ಅಶೋಕ್ ರವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅಶೋಕ್ ಹಾವಿಗೆ ವಾಂತಿ ಮಾಡಿಸಿ, ಬಾಯಲ್ಲಿದ್ದ ಮಗುವಿನ ಕಾಟನ್ ಪ್ಯಾಂಟ್ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು 4 ಫೀಟ್‌ನಷ್ಟು ಉದ್ದವಿದ್ದು, ಬಳಿಕ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಬಟ್ಟೆಯಲ್ಲಿ ಕೋಳಿ ಮೊಟ್ಟೆ ಇಟ್ಟಿದ್ದ ಕಾರಣ ಹಾವು ಬಟ್ಟೆಯನ್ನೇ ತನ್ನ ಆಹಾರದ ವಸ್ತು ಎಂದು ತಿಳಿದು ನುಂಗಿದೆ ಎಂದು ಹೇಳಲಾಗುತ್ತಿದೆ.