ನೇಸರ ಜು.05: ಮಾನಸಿಕ ಅಸ್ವಸ್ಥೆಯಾಗಿರುವ ಮಹಿಳೆಯೊಬ್ಬರು ತನ್ನ ಪತಿಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರಿನ ಅಂಬನ್ ಕೆರೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಅಂಬನ್ ಕೆರೆ ನಿವಾಸಿಯಾಗಿರುವ ಬೇಬಿ ಯಾನೆ ಯೋಹನ್ನಾನ್ (60) ಎಂಬವರನ್ನು ಅವರ ಪತ್ನಿ ನಲ್ಲಮ್ಮ ಯಾನೆ ಎಲಿಯಮ್ಮ (56) ಅವರು ರಾತ್ರಿ ಮಲಗಿರುವ ವೇಳೆ ಕತ್ತಿಯಿಂದ ತಲೆಗೆ ಕಡಿದು ಹತ್ಯೆ ಮಾಡಿದ್ದಾರೆ.
ಮನೆಯಲ್ಲಿ ಇವರು ಇಬ್ಬರು ಮಾತ್ರ ವಾಸವಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಸುಮಾರು 5:30 ರ ವೇಳೆಗೆ ಮಂಚದಲ್ಲಿ ಮಲಗಿದ್ದ ಗಂಡನನ್ನು ತಲೆಗೆ ಕತ್ತಿಯಿಂದ ಕಡಿದಿರುವುದಾಗಿ ಆಕೆ ತಿಳಿಸಿದ್ದು ರಕ್ತದ ಮಡುವಿನಲ್ಲಿ ಬೆಡ್ ಮೇಲೆಯೇ ಮೃತದೇಹ ಬಿದ್ದಿತ್ತು.
ಕಡಿಯುವ ವೇಳೆ ಎಲಿಯಮ್ಮಗೆ ಎಡಗೈಗೆ ಗಾಯವಾಗಿದೆ. ನಂತರ ಮನೆಯ ಹೊರಗಡೆ ಕತ್ತಿ ಹಿಡಿದು ತಿರುಗಾಡುತ್ತಿದ್ದರು ಎನ್ನಲಾಗಿದೆ. ಪಕ್ಕದ ಮನೆಯ ನಿವಾಸಿ ಮ್ಯಾಥ್ಯೂ ಎಂಬವರು ಎಂದಿನಂತೆ ತೋಟದ ಕೆಲಸ ಮಾಡಿಕೊಂಡು ಇವರ ಮನೆಗೆ ಬರುವಾಗ ಹೊರಗಡೆ ಗಾಯಗೊಂಡ ಕೈ ಹಿಡಿದುಕೊಂಡಿದ್ದನ್ನು ವಿಚಾರಿಸಿದಾಗ ‘ಒಳಗೆ ಹೋಗಿ ನೋಡಿ ಗೊತ್ತಾಗುತ್ತದೆ’ ಎಂದಿದ್ದಾರೆ. ಒಳಹೋದಾಗ ಮಂಚದಲ್ಲಿ ಬೇಬಿ ಕೊಲೆಯಾಗಿ ಬಿದ್ದಿರಿವುದು ಕಂಡುಬಂದಿದೆ.
2013 ರಿಂದ ಎಲಿಯಮ್ಮ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಇವರಿಗೆ ಮಕ್ಕಳು ಚಿಕಿತ್ಸೆ ಕೊಡಿಸುತ್ತಿದ್ದರು ಕಳೆದ ತಿಂಗಳು ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲಿಯೆ ಇದ್ದರು. ಮತ್ತೆ ಚಿಕಿತ್ಸೆಗೆ ವೈದ್ಯರ ಸಲಹೆಯಂತೆ ಕರೆದೊಯ್ಯುಲು ತಯಾರಿ ಮಾಡಿದ್ದರು. ಸೋಮವಾರ ರಾತ್ರಿ 11 ಗಂಟೆ ವೇಳೆಗೆ ಗಂಡ-ಹೆಂಡತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಣ್ಣಪುಟ್ಟ ಗಲಾಟೆ ನಡೆದು ಬಳಿಕ ಮಲಗಿದ್ದರು.ರಾತ್ರಿಯ ವೇಳೆಗೆ ಗಂಡ ನಿದ್ರಿಸುತ್ತಿದ್ದಾಗ ಪತ್ನಿ ಕತ್ತಿಯಿಂದ ಪತಿಯ ತಲೆ ಹಾಗೂ ಮುಖಕ್ಕೆ ಕಡಿದಿದ್ದಾರೆ ಅವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.
ಇವರಿಗೆ ಮೂವರು ಮಕ್ಕಳಿದ್ದು ಮಗಳನ್ನು ಮದುವೆ ಮಾಡಿ ಕೊಡಲಾಗಿದ್ದು ಒಬ್ಬ ಮಗ ಸಮೀಪದ ತಾಲೂಕಿನ ಸ್ಥಳ ಒಂದರಲ್ಲಿ ತೋಟವನ್ನು ಲೀಸ್ ಗೆ ಪಡೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕೊನೆಯ ಮಗ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.
ಸ್ಥಳೀಯರು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಮತ್ತು ಸಿಬ್ಬಂದಿಗಳು ಹಾಗೂ ಮಂಗಳೂರು ಬೆರಳಚ್ಚು ವಿಭಾಗ ಡಿವೈಎಸ್ಪಿ ಗೌರೀಶ್ ಬಂದು ಪರಿಶೀಲನೆ ನಡೆಸಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲಿ ಪಾಷಣ ಕೇಳಿದ್ದ ಎಲಿಯಮ್ಮ ಭಾನುವಾರ ಸಂಜೆ ಮೂರು ಗಂಟೆ ಸುಮಾರಿಗೆ ನಾವೂರಿನ ಅಂಗಡಿ ಒಂದಕ್ಕೆ ತೆರಳಿ ಇಲಿ ಪಾಷಣ ಇದೆಯಾ ಎಂದು ಕೇಳಿದ್ದಾರೆ ಈ ವೇಳೆ ಅವರ ಮಾನಸಿಕ ಅಸ್ವಸ್ಥತೆಯ ಬಗ್ಗೆ ತಿಳಿದಿದ್ದ ಅಂಗಡಿ ಮಾಲೀಕರು ಇಲಿ ಪಾಷಾಣವನ್ನು ನೀಡಿಲ್ಲ ಎಂದು ತಿಳಿದುಬಂದಿದೆ.
ಕೊಲೆ ಆರೋಪಿ ಮಂಗಳೂರು ಆಸ್ಪತ್ರೆಗೆ
ಗಂಡನನ್ನು ಕೊಲೆ ಮಾಡಿದ ಹೆಂಡತಿ ಎಲಿಯಮ್ಮನಿಗೆ ಕೈಗೆ ಗಾಯವಾಗಿದ್ದು ಮತ್ತು ಸರಿಯಾಗಿ ನಡೆದಾಡಲು ಆಗದೆ ಇರುವ ಕಾರಣ ಬೆಳ್ತಂಗಡಿ ಪೊಲೀಸರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ