ಮುಂಡಾಜೆ ಮೃತ್ಯುಂಜಯ ನದಿಯ ಕಡಂಬಳ್ಳಿ, ಕಾಪು, ಆನಂಗಳ್ಳಿ ಕಿಂಡಿ ಅಣೆಕಟ್ಟು ಚಾರ್ಮಾಡಿಯು ಅರಣಿಪಾದೆ ಕಿರು ಸೇತುವೆ, ನೇತ್ರಾವತಿ ನದಿಯ ನಿಡಿಗಲ್ ,ಪಜಿರಡ್ಕ ಕಿಂಡಿ ಅಣೆಕಟ್ಟು, ಕೊಪ್ಪದ ಗಂಡಿ ಕಿರು ಸೇತುವೆ ಹಾಗೂ ಈ ಭಾಗದ ರಾಷ್ಟ್ರೀಯ ಹೆದ್ದಾರಿಯ ಸೇತುವೆಗಳಲ್ಲೂ ಮರಮಟ್ಟು ಮತ್ತು ತ್ಯಾಜ್ಯ ಸಿಲುಕಿಕೊಂಡಿದೆ. ಇದರ ಜತೆ ತಿಂಡಿ ಅಣೆಕಟ್ಟುಗಳ ಕಾಲುವೆಗಳಲ್ಲು ತ್ಯಾಜ್ಯ ಹಾಗೂ ಮರಳು ತುಂಬಿದೆ. ನದಿಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಹೆಚ್ಚಿದರೆ ಈ ಮರಮಟ್ಟು, ತ್ಯಾಜ್ಯ ಸಮೀಪದ ತೋಟಗಳಿಗೆ ಬಂದು ಬೀಳುವ ಸಾಧ್ಯತೆ ಇದೆ. ಕಿಂಡಿ ಅಣೆಕಟ್ಟು, ಸೇತುವೆಗಳಲ್ಲಿ ಮರ ಮತ್ತು ತ್ಯಾಜ್ಯ ತುಂಬಿರುವುದರಿಂದ ನದಿಗಳ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ. ಇದರಿಂದ ಕೃತಕ ಪ್ರವಾಹ ಏರ್ಪಡುವ ಸಾಧ್ಯತೆ ಇದೆ. ಕಿಂಡಿ ಅಣೆಕಟ್ಟು, ಸೇತುವೆಗಳಿಗೆ ಬೃಹತ್ ಗಾತ್ರದ ಮರಗಳು ಬಂದು ಬಡಿಯುವುದರಿಂದ ಅವುಗಳ ಭವಿಷ್ಯಕ್ಕೂ ತೊಂದರೆ ಇದೆ. ನದಿ ಪಾತ್ರಗಳಲ್ಲಿನ ಮರಳು ತೆರವುಗೊಳ್ಳದ ಕಾರಣದಿಂದ ನೀರು ಏಕಾಏಕಿ ಏರಿಕೆ ಇಳಿಕೆಯಾಗುತ್ತಿದೆ.
ಚಾರ್ಮಾಡಿಯ ಮೃತ್ಯುಂಜಯ ನದಿಯ ಅರಣಿಪಾದೆ ಹಾಗೂ ಮಿತ್ತ ಬಾಗಿಲು ಗ್ರಾಮದ ನೇತ್ರಾವತಿ ನದಿಯ ಕೊಪ್ಪದ ಗಂಡಿ ಕಿರು ಸೇತುವೆಗಳು ಸೋಮವಾರ ಮುಳುಗಡೆಯಾಗಿ ಇವುಗಳ ಸಂಪರ್ಕ ರಸ್ತೆಗೆ ಹಾನಿಯಾಗಿದ್ದರು ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಕಂಡು ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ತೆರವು ಸವಾಲು
ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿರುವ ತ್ಯಾಜ್ಯ ಮರಮಟ್ಟು ತೆರವು ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಿಂಡಿ ಅಣೆಕಟ್ಟುಗಳ ಫಲಾನುಭವಿಗಳು ತೆರವುಗೊಳಿಸಿದರೆ ಸಂಬಂಧಪಟ್ಟ ಇಲಾಖೆ ಇದಕ್ಕೆ ಖರ್ಚಾದ ಹಣ ಪಾವತಿಸುತ್ತದೆ. ಆದರೆ ತುಂಬಿ ಹರಿಯುವ ನದಿಗಳಿಗೆ ಇಳಿದು ಇವುಗಳನ್ನು ತೆರವುಗೊಳಿಸುವುದು ಅಪಾಯಕಾರಿ. ಇದಕ್ಕೆ ಬೇಕಾದ ನುರಿತ ಕಾರ್ಮಿಕರ ಕೊರತೆಯು ಇದೆ. ಯಂತ್ರೋಪಕರಣ ಮೂಲಕ ತೆರವುಗೊಳಿಸಲು ಅನೇಕ ಕಡೆ ಸಂಪರ್ಕ ರಸ್ತೆ ನದಿ ಮೂಲಕವೇ ಇದ್ದು ಅಲ್ಲಿ ನೀರು ತುಂಬಿ ಹರಿಯುತ್ತಿದೆ. ಮರಮಟ್ಟು ಮತ್ತು ತ್ಯಾಜ್ಯ ತೆರವುಗೊಳಿಸಿದರು ಮುಂದಿನ ದಿನಗಳಲ್ಲಿ ನದಿ ತುಂಬಿ ಹರಿದಾಗ ಮತ್ತೆ ಸಂಗ್ರಹಗೊಳ್ಳುವುದು ಖಚಿತ.