ನೇಸರ ಜು.05: ಸೋಮವಾರ ಹಾಗೂ ಮಂಗಳವಾರ ಸುರಿದ ಭಾರಿ ಮಳೆಯ ಪರಿಣಾಮ ಉಜಿರೆಯ ಜನಾರ್ದನ ಶಾಲೆಯಿಂದ ರಂಜಾಳ ಕ್ರಾಸ್ ತನಕದ ಸುಮಾರು 500 ಮೀ. ರಾಷ್ಟ್ರೀಯ ಹೆದ್ದಾರಿಯ ಸಂಚಾರ ನರಕ ಯಾತನೆ ಸೃಷ್ಟಿಸಿತ್ತು.
ಮಳೆ ನೀರು ರಸ್ತೆಯಲ್ಲೇ ಹರಿದು ಪ್ರದೇಶದ ಕೆಲವು ಅಂಗಡಿ ಹೋಟೆಲ್ ಗಳ ತನಕ ವ್ಯಾಪಿಸಿತು. ಹೆದ್ದಾರಿಯಲ್ಲಿ ಸುಮಾರು ಎರಡು ಅಡಿಯಷ್ಟು ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು ಸಂಕಟ ಅನುಭವಿಸಿದರು. ನೀರು ರಸ್ತೆಯಲ್ಲಿ ಹರಿದ ಕಾರಣ ಪಾದಾಚಾರಿಗಳಿಗೆ ನಡೆದಾಡಲೂ ಅಸಾಧ್ಯ ಸ್ಥಿತಿ ನಿರ್ಮಾಣವಾಯಿತು.
ಕೆಲವೊಂದು ಅಂಗಡಿ ಹೋಟೆಲ್ ಗಳಿಗೆ ಹೋಗಬೇಕಾದರೆ ಹಳ್ಳಗಳನ್ನು ದಾಟಿ ಹೋಗುವ ಅನುಭವಾಯಿತು. ಕಳೆದ ವಾರವು ಇಲ್ಲಿ ಇಂತಹದ್ದೆ ಸಮಸ್ಯೆ ಉದ್ಭವಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ಚರಂಡಿ ದುರಸ್ತಿ ಪಡಿಸಿ ಮೋರಿಯನ್ನು ಅಳವಡಿಸಿತ್ತು. ಬಳಿಕ ಮಳೆ ಒಂದಿಷ್ಟು ಕಡಿಮೆಯಾಗಿ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ಎರಡು, ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈಗ ಹಿಂದಿಗಿಂತಲೂ ಹೆಚ್ಚಿನ ಸಮಸ್ಯೆ ಉಂಟಾಗಿದೆ.
ಮತ್ತೆ ಚರಂಡಿ ದುರಸ್ತಿ
ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಉಜಿರೆ ಗ್ರಾಮ ಪಂಚಾಯತಿ ವತಿಯಿಂದ ಜೆಸಿಬಿ ಮೂಲಕ ಚರಂಡಿ ದುರಸ್ತಿ ನಡೆಸಿ, ರೆಂಜಾಳ ಕ್ರಾಸ್ ಬಳಿ ನೀರು ಹರಿದು ಹೋಗಲು ಸಣ್ಣ ಮಟ್ಟದ ಚರಂಡಿ ನಿರ್ಮಿಸಿ ನೀರನ್ನು ಎರ್ನೋಡಿ ಹಳ್ಳಕ್ಕೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆ ಹಾಗೂ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ನೀರು ಹರಿಯಲು ತಾಸುಗಟ್ಟಲೆ ಸಮಯ ಬೇಕಾಯಿತು. ಇದರಿಂದ ಹಲವು ಸಮಯ ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬಂದಿತು. ಮುಂದಿನ ದಿನಗಳಲ್ಲಿ ಮತ್ತೆ ಸಮಸ್ಯೆ ಉಂಟಾಗಬಹುದೇ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ
ಸಮಸ್ಯೆಗೆ ಕಾರಣ
ಒಂದೆಡೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಸಮರ್ಪಕವಾಗಿ ಚರಂಡಿ ದುರಸ್ತಿಯಾಗಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಇದರ ಜತೆ ಜನತೆ ಚರಂಡಿಗಳಲ್ಲಿ ಕಸ, ಪ್ಲಾಸ್ಟಿಕ್, ಗೋಣಿಕಟ್ಟುಗಳನ್ನು ಬೇಕಾಬಿಟ್ಟಿಯಾಗಿ ಎಸೆಯುವುದರಿಂದ ಚರಂಡಿಗಳು ಮುಚ್ಚಿ ಹೋಗಿ ನೀರು ರಸ್ತೆಗೆ ನುಗ್ಗುತ್ತಿದೆ. ಪಂಚಾಯಿತಿಯ ಗಮನಕ್ಕೆ ಬಾರದೆ ಸಂಪರ್ಕ ರಸ್ತೆಗಳನ್ನು ನಿರ್ಮಿಸುವಾಗ ಸಣ್ಣ ಮಟ್ಟದ ಮೋರಿಗಳನ್ನು ಅಳವಡಿಸುವುದು, ಮಣ್ಣು ಹಾಕಿ ಚರಂಡಿ ಮುಚ್ಚುವುದು ಕೂಡ ಇದಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾಮಗಾರಿಗಳು ಕಂಡು ಬಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸ್ಥಳದಲ್ಲಿ ಹಾಜರಿದ್ದ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು,ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ಸದಸ್ಯರು ತಿಳಿಸಿದ್ದಾರೆ.