ನೇಸರ ಜು.14: ಶಿರಾಢಿಘಾಟ್ನಲ್ಲಿ ಮತ್ತೆ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.
ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ವಾರದ ಹಿಂದೆ ಅಲ್ಪ ಪ್ರಮಾಣದಲ್ಲಿ ರಸ್ತೆ ಕುಸಿದಿತ್ತು. ರಸ್ತೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಪರಿಶೀಲನೆ ನಡೆಸಿದ್ದರು. ಸಚಿವರು ಭೇಟಿ ನೀಡಿದ ನಾಲ್ಕನೇ ದಿನಕ್ಕೆ ಮತ್ತೆ ಭೂಕುಸಿತವಾಗಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ರಸ್ತೆ ಕುಸಿದಿತ್ತು. ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಇಂದು ಮಧ್ಯಾಹ್ನದ ವೇಳೆಗೆ ಮತ್ತೆ ಭೂಕುಸಿತವಾಗಿದ್ದು, ಈ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಲಘು ವಾಹನಗಳನ್ನು ಏಕ ಮುಖ ಸಂಚಾರದಂತೆ ಚಲಿಸಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ.
ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತೆ ಕುಸಿಯುತ್ತಿರುವ ರಸ್ತೆಯಿಂದ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ.