ನೇಸರ ಜು.14: ರಾಷ್ಟ್ರೀಯ ಹೆದ್ದಾರಿ 73ರ ನಿಡಿಗಲ್ ನೂತನ ಸೇತುವೆಯಲ್ಲಿ ಮತ್ತೆ ಮತ್ತೆ ಹೊಂಡಗಳು ನಿರ್ಮಾಣವಾಗುತ್ತಿದ್ದು, ತೇಪೆ ಹಾಕುವ ಕೆಲಸವು ನಡೆಯುತ್ತಿದೆ.
2020ರ ನವೆಂಬರ್ ನಲ್ಲಿ ಲೋಕಾರ್ಪಣೆಗೊಂಡ ಈ ಸೇತುವೆಯ ಮೇಲ್ಪದರದಲ್ಲಿ ಆಗಾಗ ಹೊಂಡಗಳು ನಿರ್ಮಾಣವಾಗುತ್ತಿರುವುದು ಮಾಮೂಲಾಗಿದೆ. ಈಗಾಗಲೇ ಸುಮಾರು ಹತ್ತಕ್ಕಿಂತ ಅಧಿಕ ಕಡೆ ಸೇತುವೆಯ ಮೇಲ್ಪದರದಲ್ಲಿ ಹೊಂಡಗಳು ನಿರ್ಮಾಣವಾಗಿ ಮೈಕ್ರೋ ಕಾಂಕ್ರೀಟ್ ಹಾಕಲಾಗಿದೆ. ಆದರೆ ಒಂದು ಕಡೆಯ ಹೊಂಡ ಮುಚ್ಚುತ್ತಿದ್ದಂತೆ ಸಮೀಪದಲ್ಲಿ ಇನ್ನೊಂದು ಹೊಂಡ ನಿರ್ಮಾಣವಾಗುತ್ತಿದೆ.
ಕಳೆದ 15 ದಿನಗಳಲ್ಲಿ ಸುಮಾರು ನಾಲ್ಕು ಬಾರಿ ತೇಪೆ ಹಾಕುವ ಕಾಮಗಾರಿ ನಡೆದಿದೆ. ಈಗ ಮತ್ತೆ ಹೊಂಡ ನಿರ್ಮಾಣವಾಗಿದೆ. ಅಗತ್ಯ ಸಂದರ್ಭಕ್ಕೆ ಎಂಬಂತೆ ಎರಡು ಬ್ಯಾರಿಕೇಡ್ ಗಳನ್ನು ಸೇತುವೆಯ ಬದಿಯಲ್ಲೇ ಇಡಲಾಗಿದೆ.
ಕಾರಣ
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ ಪ್ರಕಾರ ಇಲ್ಲಿ ಸೇತುವೆಗೆ ಯಾವುದೇ ರೀತಿಯ ತೊಂದರೆ ಇಲ್ಲ. ಸೇತುವೆ ನಿರ್ಮಾಣದ ಸಮಯ ಮೇಲ್ಪದರದ ಕ್ಯೂರಿಂಗ್ ನಲ್ಲಿ ಉಂಟಾಗಿರುವ ವ್ಯತ್ಯಾಸ ಹಾಗೂ ಪ್ರಸ್ತುತ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಸೇತುವೆಯ ಮೇಲ್ಪದರ ಹಾನಿಗೊಳ್ಳುತ್ತಿದೆ, ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.