ಭಾರೀ ಮಳೆ: ನೆಲ್ಯಾಡಿ ಪರಿಸರದಲ್ಲಿ ದೇವಸ್ಥಾನದ ಜಲಾವೃತ ➽ ತೋಟಕ್ಕೆ ನುಗ್ಗಿದ ನೀರು ➽ ಕೃಷಿ ನಾಶ ➽ ರಸ್ತೆ ಸಂಪರ್ಕ ಬಂದ್

ಶೇರ್ ಮಾಡಿ

ನೇಸರ ಜು.18: ನೆಲ್ಯಾಡಿ ಪರಿಸರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಳೆ ನೀರು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಆಗಿದೆ. ಗ್ರಾಮದ ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನ ಜಲಾವೃತಗೊಂಡಿತ್ತು. ಕೊಲ್ಯೊಟ್ಟುನ ಸಂಪರ್ಕ ರಸ್ತೆ ಬಂದ್ ಆಗಿ ಸುಮಾರು 3 ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.
ನಿರಂತರ ಮಳೆಯಾಗಿದ್ದು ಮಳೆ ನೀರಿನಿಂದ ನದಿ ಹಳ್ಳ ಭರ್ತಿಗೊಂಡು ನೀರು ತೋಟಗಳಿಗೆ ನುಗ್ಗಿದೆ. ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು, ಆಮುಂಜ, ಪರಾರಿ, ಭಾಗದಲ್ಲಿ ನೀರು ತೋಟಗಳಿಗೆ ನುಗ್ಗಿದ್ದು ಕೃಷಿಗಳು ಜಲಾವೃತಗೊಂಡಿತ್ತು. ಇದರಿಂದಾಗಿ ಕೃಷಿ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.

ಪೊಸೊಳಿಕೆ ಎಂಬಲ್ಲಿ ಹೊಳೆ ನೀರು ಪರಿಸರದ ಅಡಿಕೆ ತೋಟಗಳಿಗೆ ನುಗ್ಗಿ ಹಾನಿ ಸಂಭವಿಸಿದೆ. ಮಳೆ ನೀರಿನಿಂದಾಗಿ ನೆಲ್ಯಾಡಿ ಗ್ರಾಮದ ಪಡುಬೆಟ್ಟು ದೇವಸ್ಥಾನಕ್ಕೆ ನೀರು ನುಗ್ಗಿದ ಪರಿಣಾಮ ಬೆಳಿಗ್ಗೆ ಜಲಾವೃತಗೊಂಡಿತ್ತು. ದೇವಸ್ಥಾನ ಸಮೀಪದ ಹೊಳೆಯಲ್ಲಿ ನೀರು ಭರ್ತಿಯಾಗಿ ದೇವಸ್ಥಾನದ ಹೊರಾಂಗಣ, ಒಳಾಂಗಣಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಸುತ್ತಲೂ ನೀರು ಆವರಿಸಿಕೊಂಡಿತ್ತು.

ಕೊಲ್ಯೊಟ್ಟು-ಮಾದೇರಿ-ನೆಲ್ಯಾಡಿ ಸಂಪರ್ಕ ರಸ್ತೆಯ ಕೊಲ್ಯೊಟ್ಟು ಎಂಬಲ್ಲಿ ಮಳೆ ನೀರು ರಸ್ತೆಗೆ ಬಂದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನ ಓಡಾಟಕ್ಕೆ ತೊಂದರೆಯಾಗಿತ್ತು. ಸುಮಾರು 3 ಗಂಟೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು ಎಂದು ತಿಳಿದುಬಂದಿದೆ.

Leave a Reply

error: Content is protected !!