ನೇಸರ ಜು.27: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಜಿತ್ ನಗರ ಪರಿಸರದಲ್ಲಿ ಕಳೆದ ಒಂದು ವಾರದಿಂದ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು ಈ ಬಗ್ಗೆ ಮಂಗಳವಾರ ಕಲ್ಮಂಜ ಗ್ರಾಪಂ ಪಿಡಿಒ ಇಮ್ತಿಯಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಜಿರೆ ಹಾಗೂ ಕಲ್ಮಂಜ ಗ್ರಾಮ ಪಂಚಾಯಿತಿ ಗಡಿಭಾಗವಾದ ಅಜಿತ್ ನಗರ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಸುಮಾರು 12ಕ್ಕಿಂತ ಅಧಿಕ ಸಾಕು ನಾಯಿಗಳು ಸಾವನ್ನಪ್ಪಿವೆ. 15ಕ್ಕಿಂತ ಅಧಿಕ ನಾಯಿಗಳು ಅಸ್ವಸ್ಥ ಸ್ಥಿತಿಯಲ್ಲಿವೆ.
ಯಾರೋ ಕಿಡಿಗೇಡಿಗಳು ವಿಷವಿಕ್ಕಿರುವ ಕಾರಣದಿಂದ ನಾಯಿಗಳನ್ನು ಸಾವನ್ನಪ್ಪುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಶಂಕೆ ವ್ಯಕ್ತವಾಗಿದ್ದು, ಪರಿಸರದ ಪೊದೆಯೊಂದರ ಬಳಿ ವಿಷವಿಕ್ಕಿರುವ ಕುರುಹುಗಳು ಕಂಡುಬಂದಿವೆ.
ಕಟ್ಟಿ ಸಾಕುವ ನಾಯಿಗಳು, ಸಂಜೆ ವೇಳೆ ಒಂದಿಷ್ಟು ಹೊತ್ತು ಬಿಟ್ಟ ಸಮಯ ತಿರುಗಾಟ ನಡೆಸಿರುವ ವಿಷವನ್ನು ತಿಂದಿವೆ. ಇದರಲ್ಲಿ ಉತ್ತಮ ಜಾತಿಯ ನಾಯಿಗಳು ಸೇರಿವೆ. ಪರಿಸರದ ಇನ್ನಷ್ಟು ನಾಯಿಗಳು ಸಾವನ್ನಪ್ಪುವ ಪರಿಸ್ಥಿತಿಯಲ್ಲಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಪಂ ಸಿಬ್ಬಂದಿ ರುಕೇಶ್ ಸ್ಥಳೀಯರಾದ ಸುಧೀರ್, ರಾಧಾಕೃಷ್ಣ, ಆನಂದ, ಶ್ರೀಕಾಂತ್ ಮೊದಲಾದವರು ಇದ್ದರು.
ಬೀದಿನಾಯಿಗಳ ಕಾಟ
ಉಜಿರೆ, ಕಲ್ಮಂಜ, ಮುಂಡಾಜೆ, ಚಾರ್ಮಾಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಗ್ರಾಪಂ ಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ರಸ್ತೆಯುದ್ದಕ್ಕೂ ಅಡ್ಡಾಡುವ ನಾಯಿಗಳು ವಾಹನ ಸವಾರರಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸುತ್ತಿವೆ. ಕೆಲವೊಂದು ಬೀದಿ ನಾಯಿಗಳು ಶಾಲಾ ಮಕ್ಕಳನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಕುರಿತು ಪೋಷಕರು ಅಳಲು ವ್ಯಕ್ತಪಡಿಸಿದ್ದಾರೆ.