ನೇಸರ ಜು.31: ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಇಚ್ಛಾಶಕ್ತಿ ಇರಲಿ. ಎಲ್ಲಿಯವರೆಗೆ ಆಸಕ್ತಿ ಇರುತ್ತದೋ ಅಲ್ಲಿಯವರೆಗೆ ಉದ್ಯಮದಲ್ಲಿ ಮುಂದುವರೆಯಲು ಸಾಧ್ಯ. ಜೀವನದಲ್ಲೂ ಆಸಕ್ತಿಯನ್ನು ಬೆಳೆಸಿಕೊಳ್ಳಿ, ಶಿಸ್ತು ಮತ್ತು ಸಾಧನ ಪ್ರೇರಣೆಯನ್ನು ಅಳವಡಿಸಿಕೊಂಡು ಮುಂದುವರಿಯಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್ ಮಂಜುನಾಥ್ ಹೇಳಿದರು.
ಅವರು ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ನಡೆದ ಸಾಮಾನ್ಯ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಈ ತರಬೇತಿಯು ವಿಶೇಷವಾಗಿ ಧರ್ಮಸ್ಥಳ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾಗಿರುವ ಡಾ.ಹೇಮಾವತಿ ವಿ. ಹೆಗ್ಗಡೆಯವರ ಆಶಯದಂತೆ ಜ್ಞಾನ ವಿಕಾಸ ಮಹಿಳಾ ಸ್ವಸಹಾಯ ಸಂಘದ ಆಸಕ್ತ ಸದಸ್ಯರುಗಳಿಗೆ ನಡೆಸಲಾಯಿತು. ನಿರ್ದೇಶಕರಾದ ಎನ್. ಸುರೇಶ್ ತರಬೇತಿಯ ಹಿನ್ನೋಟವನ್ನು ನೀಡಿದರು.
ಜ್ಞಾನವಿಕಾಸ ಅಧಿಕಾರಿಗಳಾದ ಅಮೃತಾ ಶೆಟ್ಟಿ, ಶಶಿಕಲಾ ಹಾಗೂ ಕಿಶೋರಿ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು. ಅಬ್ರಹಾಂ ಜೇಮ್ಸ್ ವಂದಿಸಿದರು. ಶಿಬಿರದಲ್ಲಿ ಒಟ್ಟು 28 ಮಂದಿ ಭಾಗವಹಿಸಿದ್ದರು.