ಕೊಕ್ಕಡ:ಶಾಲಾ ಆವರಣದೊಳಗೆ ವಿದ್ಯುತ್ ಕಂಬ ಹಾಗೂ ಜೋತು ಬಿದ್ದಿರುವ ತಂತಿಗಳು ವಿದ್ಯಾರ್ಥಿಗಳಿಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದ್ದು ಕೂಡಲೇ ಇದನ್ನು ತೆರವುಗೊಳಿಸಿ ಭಯ ಮುಕ್ತ ವಾತಾವರಣವನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಲ್ಪಿಸಬೇಕೆಂದು ಕೊಕ್ಕಡ ಗ್ರಾಮದ ಉಪ್ಪಾರಪಳಿಕೆಯ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪೋಷಕು ಮೆಸ್ಕಾಂ ಇಲಾಖೆಗೆ ಆಗ್ರಹಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದಲೂ ಈ ಬಗ್ಗೆ ಮೆಸ್ಕಾಂ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೆ ತಂತಿಗಳ ತೆರವಿನ ಕಾರ್ಯ ನಡೆದಿಲ್ಲ. ಅಲ್ಲದೆ ಆವರಣದೊಳಗಿರುವ ವಿದ್ಯುತ್ ಕಂಬದಿಂದ ಸ್ಥಳೀಯ ಮನೆಗಳಿಗೆ ಸಂಪರ್ಕ ನೀಡಲಾಗಿದ್ದು, ಕೆಲವೆಡೆ ವಿದ್ಯಾರ್ಥಿಗಳ ಕೈಗೆಟಕುವಂತೆ ಅಪಾಯಕಾರಿ ತಂತಿಗಳಿವೆ ಎಂದು ಪೋಷಕರು ಅಸಮಾಧಾನಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೆಸ್ಕಾಂನ ಉಜಿರೆ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್ ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ಕಾರ್ಯ ಪ್ರವೃತ್ತರಾಗುವುದಾಗಿ ತಿಳಿಸಿದ್ದಾರೆ.