ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರವನ್ನು ದಿಲ್ಲಿಯ ಹಿರಿಯ ನ್ಯಾಯವಾದಿ ಕೆ.ವಿ. ವಿಶ್ವನಾಥನ್, ವಿ.ಎನ್. ರಘುಪತಿ, ಕೆ. ಚಂದ್ರನಾಥ ಆರಿಗ, ಬೆಂಗಳೂರು, ಮತ್ತು ಬೆಳ್ತಂಗಡಿಯ ನ್ಯಾಯವಾದಿ ರತ್ನವರ್ಮ ಬುಣ್ಣು ಅವರ ತಂಡ ಪ್ರತಿನಿಧಿಸಿತ್ತು.
ಧರ್ಮಸ್ಥಳ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿಯ ಸಂಸ್ಥೆಗಳ ಕುರಿತು ಗೌರವಕ್ಕೆ ಚ್ಯುತಿ ತರುವ ಹೇಳಿಕೆ ನೀಡಬಾರದೆಂದು ಬೆಳ್ತಂಗಡಿ ಸಿವಿಲ್ ನ್ಯಾಯಾಲಯವು ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಸೋಮನಾಥ ನಾಯಕ್ ವಿರುದ್ಧ ವಿಧಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಮಧ್ಯಪ್ರವೇಶ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸೋಮನಾಥ ನಾಯಕ್ ಬಂಧನಕ್ಕೆ 2022ರ ಮೇ 5ರಂದು ಹೈಕೋರ್ಟ್ ಹಸಿರು ನಿಶಾನೆ ನೀಡಿತ್ತು. ಈ ಆದೇಶದ ವಿರುದ್ಧ ಸೋಮನಾಥ್ ನಾಯಕ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೋಮನಾಥ ನಾಯಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎರಡೂ ಕಡೆಯ ವಾದಗಳನ್ನು ಆಲಿಸಿ ಅ.19ರಂದು ಕರ್ನಾಟಕ ಹೈಕೋರ್ಟ್ ಹಾಗೂ ಬೆಳ್ತಂಗಡಿ ನ್ಯಾಯಾಲಯಗಳು ನೀಡಿದ ತೀರ್ಪುಗಳಿಗೆ ತಾನು ಮಧ್ಯಪ್ರವೇಶಿಸುವ ಯಾವುದೇ ಕಾರಣ ಕಂಡು ಬರುವುದಿಲ್ಲ ಎಂದು ತಿಳಿಸಿದೆ.
ಕ್ಷಮಾಪಣೆ ತಿರಸ್ಕಾರ:
ನ್ಯಾಯಾಲಯದ ಪ್ರತಿಬಂಧಕಾಜ್ಞೆ ಊರ್ಜಿತದಲ್ಲಿದ್ದರೂ ಅರ್ಜಿದಾರ ಕೆ. ಸೋಮನಾಥ್ ನಾಯಕ್ ಆದೇಶ ಉಲ್ಲಂಘಿಸಿದ ತಪ್ಪಿತಸ್ಥ ಎಂಬುದು ರುಜುವಾತುಗೊಂಡ ಕಾರಣ ವಾದ ಮಂಡನೆಯ ಮಧ್ಯೆ ನ್ಯಾಯಪೀಠವು ಅವರ ವರ್ತನೆಗೆ ಛೀಮಾರಿ ಹಾಕಿದೆ. ಅವರು ನಿವೇದಿಸಿಕೊಂಡ ಕ್ಷಮಾಪಣೆಯನ್ನೂ ತಿರಸ್ಕರಿಸಿ, ಅರ್ಜಿಯನ್ನು ವಜಾ ಮಾಡಿದೆ.
ಸೋಮನಾಥ ನಾಯಕ್ ತಪ್ಪಿತಸ್ಥರೆಂದು ರುಜುವಾತಾದ ಕಾರಣ ಬೆಳ್ತಂಗಡಿಯ ಹೆಚ್ಚುವರಿ ನ್ಯಾಯಾಲಯ 2022ರ ಮಾ.31ರಂದು ಸೋಮನಾಥ ನಾಯಕ್ ವಿರುದ್ಧ ಬಂಧನ ವಾರಂಟ್ ಹೊರಡಿಸಿ, 3 ತಿಂಗಳ ಸೆರೆಮನೆ ವಾಸಕ್ಕೆ ಕಳುಹಿಸಲು ಆದೇಶಿಸಿತ್ತು.
ಈ ಆದೇಶಗಳ ವಿರುದ್ಧ ಸೋಮನಾಥ ನಾಯಕ್ 2022ರ ಏ.16ರಂದು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತನ್ನನ್ನು ಬಂಧಿಸದಂತೆ ತಡೆಯಾಜ್ಞೆ ನೀಡಬೇಕೆಂದೂ, ಬೆಳ್ತಂಗಡಿ ನ್ಯಾಯಾಲಯಗಳ ಆದೇಶವನ್ನು ವಜಾ ಮಾಡಬೇಕೆಂದು ಪ್ರಾರ್ಥಿಸಿಕೊಂಡಿದ್ದರು.
ಸುದೀರ್ಘ ವಾದ-ವಿವಾದ ಆಲಿಸಿದ ಕರ್ನಾಟಕ ಹೈಕೋರ್ಟ್, ಈ ಆದೇಶ ನ್ಯಾಯೋಚಿತವಾಗಿದ್ದು ತಾನು ಮಧ್ಯ ಪ್ರವೇಶಿಸುವ ಅಗತ್ಯವೇ ಇರುವುದಿಲ್ಲಎಂದು ತನ್ನ 148 ಪುಟಗಳ ತೀರ್ಪು ನೀಡಿ, ಸೋಮನಾಥ ನಾಯಕ್ ಬಂಧನಕ್ಕೆ 2022ರ ಮೇ 5ರಂದು ಹಸಿರು ನಿಶಾನೆ ನೀಡಿತ್ತು. ಈ ಆದೇಶದ ವಿರುದ್ಧ ಸೋಮನಾಥ್ ನಾಯಕ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.