ನೆಲ್ಯಾಡಿ: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅಕ್ಟೋಬರ್28 ರಂದು ಬೆಳಿಗ್ಗೆ 11:00 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾರ್ಗದರ್ಶನದಂತೆ ಕನ್ನಡ ನಾಡನ್ನು ಪ್ರತಿಬಿಂಬಿಸುವ ಹಾಡುಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಹಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯರಾಜ್ ಎನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ನಾಡು-ನುಡಿ, ಪರಿಸರ, ಸಂಸ್ಕೃತಿ, ಪರಂಪರೆಗಳನ್ನು ವರ್ಣಿಸುವ ಈ ಹಾಡುಗಳು ನಮ್ಮೆಲ್ಲರಲ್ಲಿ ನಮ್ಮ ನಾಡಿನ ಬಗ್ಗೆ ದೇಶದ ಬಗ್ಗೆ ಅಭಿಮಾನವನ್ನು ಹೆಚ್ಚಿಸುತ್ತವೆ. ಈ ನೆಲದ ಭವ್ಯ ಸಂಪನ್ಮೂಲಗಳನ್ನು, ಜೀವವೈವಿಧ್ಯತೆಯನ್ನು ಕಾಪಿಟ್ಟುಕೊಳ್ಳುವ ಜವಾಬ್ದಾರಿಯುತ ಕರ್ತವ್ಯ ಪ್ರಜ್ಞೆಯನ್ನು ನಮ್ಮಲ್ಲಿ ಮೂಡಿಸುತ್ತವೆ. ಹಾಗಾಗಿ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ, ವಿಜ್ರಂಬಣೆಯಿಂದ ಆಚರಿಸಲು ಆಸಕ್ತರಾಗಿರುವ ನಮಗೆ ಈ ಕೋಟಿ ಕಂಠ ಗಾಯನ ಕಾರ್ಯಕ್ರಮವು ಹೊಸ ಉತ್ಸಾಹವನ್ನು ತರುತ್ತದೆ ಎಂದರು.
ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಉಪನ್ಯಾಸಕಿಯರಾದ ದಿವ್ಯಶ್ರೀ ಜಿ, ಶೃತಿ, ಸ್ಪೂರ್ತಿ ಕೆ.ಟಿ, ಡೀನಾ ಪಿ, ವೆರೊಣಿಕಾ ಪ್ರಭಾ, ದಿವ್ಯಾ ಕೆ, ಚಂದ್ರಕಲಾ, ನಿಶ್ಮಿತಾ ಪಿ, ಎಲ್ಲಾ ಉಪನ್ಯಾಸಕ ವೃಂದದವರು ಪಾಲ್ಗೊಂಡು ಹಾಡುವುದರ ಮೂಲಕ ಕನ್ನಡ ನಾಡಿನ ಅಭಿಮಾನವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಹ ಸಂಯೋಜಕರಾದ ಡಾ.ಸೀತಾರಾಮ ಪಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುರೇಶ್ ಕೆ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಯಾದ ವನಿತಾ ಪಿ, ದೈಹಿಕ ನಿರ್ದೇಶಕರಾದ ಆನಂದ, ಗ್ರಂಥಪಾಲಕರಾದ ಶ್ರೀಮತಿ ಶೋಭಾ, ಬೋಧಕೇತರ ಸಿಬ್ಬಂದಿಯವರಾದ ದಿವ್ಯಾ, ಸುಮಾ, ವಿಮಲಾ ಮತ್ತು ವಸಂತ ಸಾಲ್ಯಾನ್ ಅವರು ಮತ್ತು ಎಲ್ಲಾ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ನೂರಂದಪ್ಪ ಅವರು ಸಂಕಲ್ಪ ವಿಧಿಯನ್ನು ಬೋಧಿಸಿದರು ಮತ್ತು ಕಾರ್ಯಕ್ರಮವನ್ನು ನಿರ್ವಹಿಸಿದರು.