ನೇಸರ ಡಿ.21: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾ.ಪಂ. ವ್ಯಾಪ್ತಿಯ ಅನಾರು ಎಂಬಲ್ಲಿರುವ ಸ.ಉ.ಹಿ.ಪ್ರಾ.ಶಾಲೆಗೆ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಪ್ರವೇಶಿಸಿ, ಶಾಲೆಯ ಬಹಳಷ್ಟು ಸೊತ್ತುಗಳನ್ನು ಹಾಳು ಗೆಡವಿದ ಘಟನೆ ಡಿ.21ರ ತಡರಾತ್ರಿ ನಡೆದಿದೆ. ಇಂದು ಬೆಳಗ್ಗೆ ಶಾಲಾ ಶಿಕ್ಷಕರು ಶಾಲೆಗೆ ಬಂದಾಗ ಈ ಕೃತ್ಯ ಗಮನಕ್ಕೆ ಬಂದಿದೆ.
ಶಾಲೆಯ ಸೂಚನಾ ಫಲಕ, ಕೊಳವೆಬಾವಿಯ ಪೈಪ್, ನೀರಿನ ನಳ್ಳಿ, ಹೂತೋಟದ ಕಬ್ಬಿಣದ ಬೇಲಿಯ ಗೇಟ್ ಗಳು ಮೊದಲಾದ ಸೊತ್ತುಗಳನ್ನು ಹಾಳುಗೆಡವಲಾಗಿದೆ. ಬಾವಿಯ ರಾಟೆ ಮತ್ತು ಹಗ್ಗ, ನೀರಿನ ಸಿಂಟೆಕ್ಸ್ ನ ಮುಚ್ಚಳವನ್ನು ಕದ್ದೊಯ್ಯಲಾಗಿದೆ. ನಲಿಕಲಿ ಕೊಠಡಿಯ ಬೀಗ ಮುರಿಯಲು ಪ್ರಯತ್ನಿಸಿರುವುದು ಕಂಡುಬಂದಿದ್ದು,ನಂತರ ಕಿಟಿಕಿಯನ್ನು ತೆರೆದು ನಲಿಕಲಿ ಮಕ್ಕಳ ಪುಸ್ತಕಗಳ ಹಗ್ಗಗಳನ್ನು ಹೊರಗಿನಿಂದಲೇ ಕೈಹಾಕಿ ತುಂಡರಿಸಿ ಪುಸ್ತಕಗಳನ್ನೆಲ್ಲ ಬೀಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆ ಬಯಲಿಗೆ ಬರುತ್ತಿದ್ದಂತೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ಶಾಲಾ ಸಿ ಆರ್ ಪಿ, ಪಂಚಾಯತ್ ಅಧ್ಯಕ್ಷರು,ಸದಸ್ಯರು, ಪಿಡಿಓ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಹಾಳಾಗಿರುವ ಸೊತ್ತುಗಳನ್ನು ದುರಸ್ತಿಪಡಿಸಿಕೊಡಲು ಪಂಚಾಯತ್ ಅಧ್ಯಕ್ಷರಲ್ಲಿ ವಿನಂತಿಸಲಾಗಿ, ಮಧ್ಯಾಹ್ನ ವೇಳೆಗೆ ದುರಸ್ತಿ ಮಾಡಿಸಿ ಕೊಟ್ಟಿರುತ್ತಾರೆ. ಶಾಲೆಗೆ ಮುಂದಿನ ದಿನಗಳಲ್ಲಿ ರಕ್ಷಣಾ ದೃಷ್ಟಿಯಿಂದ ಶಾಲೆಗೆ ಪಂಚಾಯತ್ ವತಿಯಿಂದ ಸೂಕ್ತ ಸಿಸಿ ಕ್ಯಾಮರಾ ಅಳವಡಿಸಿ ಕೊಡುವುದಾಗಿಯೂ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು.
ಕಳೆದ ಎರಡು ವರ್ಷಗಳ ಹಿಂದಷ್ಟೇ ಅತ್ಯಂತ ಜೀರ್ಣಾವಸ್ಥೆಯಲ್ಲಿದ್ದ ಈ ಶಾಲೆಯು ಊರ ಹಾಗೂ ಪರ ಊರ ದಾನಿಗಳ ನೆರವಿನಿಂದ ಸಾಕಷ್ಟು ಸೌಲಭ್ಯಗಳನ್ನು ಹೊಂದಿತ್ತು.ಸರಕಾರದಿಂದಲೂ ಮೂರು ಕೊಠಡಿಗಳಾಗಿದ್ದವು. ತನ್ಮೂಲಕ ಜಿಲ್ಲೆಯಲ್ಲಿಯೇ ಹೆಸರು ಪಡೆದ ಶಾಲೆ ಇದಾಗಿತ್ತು. ಮಕ್ಕಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಆಗುತ್ತಿದೆ. ಇಂಥಹಾ ಉತ್ತಮ ಬೆಳವಣಿಗೆಯ ನಡುವೆ ಈ ದುಷ್ಕೃತ್ಯ ನಡೆದಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ.
ಜಾಹೀರಾತು