ಕುಂತೂರುಪದವು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಮೇಲ್ದರ್ಜೆಗೇರಿಸಲು ಆಗ್ರಹ; ನಿರ್ಣಯ
ನೆಲ್ಯಾಡಿ: ಕುಂತೂರುಪದವು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಮೇಲ್ದರ್ಜೆಗೇರಿಸುವಂತೆ ಪೆರಾಬೆ ಗ್ರಾ.ಪಂ.ಗ್ರಾಮಸಭೆಯಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಫೆ.9ರಂದು ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ರೈ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಕಡಬ ತಾಲೂಕು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಅಜಿತ್ ಚರ್ಚಾನಿಯಂತ್ರಣಾಧಿಕಾರಿಯಾಗಿದ್ದರು. ಕುಂತೂರುಪದವು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಕ್ಕೆ ಪಶುವೈದ್ಯರ ನೇಮಕ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅಜಿತ್ ಅವರು, ಪಶುಸಂಗೋಪನಾ ಇಲಾಖೆಯಲ್ಲಿ ಪಶುವೈದ್ಯರ ಕೊರತೆ ಇದೆ. ಕಡಬ ತಾಲೂಕಿನಲ್ಲಿ 8 ಪಶುಚಿಕಿತ್ಸಾ ಕೇಂದ್ರಗಳಿದ್ದು ಇಬ್ಬರು ವೈದ್ಯರು ಮಾತ್ರ ಇದ್ದಾರೆ. ಕುಂತೂರುಪದವು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಆಗಿರುವುದರಿಂದ ಇಲ್ಲಿಗೆ ಪಶುವೈದ್ಯರು ಬರುವುದಿಲ್ಲ. ಆದ್ದರಿಂದ ಸದ್ರಿ ಪಶುಚಿಕಿತ್ಸಾ ಕೇಂದ್ರ ಮೇಲ್ದರ್ಜೆಗೇರಿಸಬೇಕೆಂದು ಹೇಳಿದರು. ಇದಕ್ಕೆ ಗ್ರಾಮಸ್ಥರೂ ಸಹಮತ ಸೂಚಿಸಿದ್ದು ಗ್ರಾಮಸ್ಥರ ಬೇಡಿಕೆಯಂತೆ ಕುಂತೂರುಪದವು ಪಶು ಚಿಕಿತ್ಸಾ ಕೇಂದ್ರ ಮೇಲ್ದರ್ಜೆಗೇರಿಸುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಕುಂತೂರು ಗ್ರಾ.ಪಂ.ಗೆ ಮನವಿ:
ಕುಂತೂರು ಗ್ರಾಮಕ್ಕೆ ಪ್ರತ್ಯೇಕವಾಗಿ ಗ್ರಾ.ಪಂ.ರಚನೆ ಮಾಡಬೇಕೆಂದು ಕಳೆದ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದು ಯಾವ ಹಂತಕ್ಕೆ ತಲುಪಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿ ಅವರು, ಈ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಅಧ್ಯಕ್ಷ ಮೋಹನ್‌ದಾಸ್ ರೈಯವರು, ಗ್ರಾಮ ಪಂಚಾಯತ್‌ಗೆ ಜಾಗ ಕಾದಿರಿಸಬೇಕಾಗಿದೆ. ಕುಂತೂರು ಗ್ರಾಮದಲ್ಲಿನ ಸರಕಾರಿ ಜಾಗದ ಪರಿಶೀಲನೆ ಮಾಡಲಾಗಿದೆ. ತಾ.ಪಂ.ಇಒ ಅವರು ಸಹ ಬಂದು ಪರಿಶೀಲನೆ ನಡೆಸಿದ್ದಾರೆ. ಜಾಗ ಕಾಯ್ದಿರಿಸಲಾಗುವುದು. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಧನಸಹಾಯ-ಚರ್ಚೆ:
ಅಂಗನವಾಡಿಯಲ್ಲಿ ನಡೆದ ಬಾಲಮೇಳಕ್ಕೆ ಗ್ರಾಮ ಪಂಚಾಯಿತಿಯಿಂದ ಕೇವಲ 1 ಸಾವಿರ ರೂ.ಧನ ಸಹಾಯ ನೀಡಲಾಗಿದೆ. ಗ್ರಾಮ ಪಂಚಾಯಿತಿನಿಂದಲೂ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯೋರ್ವರು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿ ಅವರು, ಬಾಲಮೇಳಕ್ಕೆ ಗ್ರಾ.ಪಂ.ನಿಂದ ಇಷ್ಟೇ ಧನಸಹಾಯ ನೀಡಬೇಕೆಂಬ ಸುತ್ತೋಲೆ ಇಲ್ಲ. ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ 1 ಸಾವಿರ ರೂ.,ನೀಡಲಾಗಿದೆ. ಸದ್ರಿ ದಿನ ಸಭೆ ಹಾಗೂ ಇನ್ನಿತರ ಕೆಲಸಗಳಿದ್ದ ಹಿನ್ನೆಲೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಕಲಚೇತನರಿಗೂ ಉಚಿತ ವಿದ್ಯುತ್ ನೀಡಿ:
ಎಸ್‌ಸಿ ಹಾಗೂ ಎಸ್‌ಟಿ ಫಲಾನುಭವಿಗೆ 75 ಯುನಿಟ್ ತನಕ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದೇ ರೀತಿ ವಿಕಲಚೇತನರು ಇರುವ ಮನೆಯವರಿಗೂ 75 ಯುನಿಟ್ ತನಕ ಉಚಿತ ವಿದ್ಯುತ್ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ಮನೆಗಳ ಅಳತೆ:
ಮನೆಗಳ ಅಳತೆ ಮಾಡಿ ಆನ್‌ಲೈನ್‌ನಲ್ಲಿ ದಾಖಲೆ ಮಾಡಬೇಕಾಗಿರುವುದರಿಂದ ಮುಂದಿನ ತಿಂಗಳಲ್ಲಿ ಸಮೀಕ್ಷೆ ನಡೆಸಿ ಅಳತೆ ಮಾಡಲಾಗುವುದು. ಸಿಬ್ಬಂದಿಗಳು ಮನೆ ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರು ಸಹಕರಿಸುವಂತೆ ಪಿಡಿಒ ಶಾಲಿನಿ ಅವರು ಮನವಿ ಮಾಡಿದರು. ಕಜೆ ಬಸ್‌ನಿಲ್ದಾಣದ ಪಕ್ಕ ಶೌಚಾಲಯ ನಿರ್ಮಾಣ, ಗ್ರಾಮ ಪಂಚಾಯತ್ ರಸ್ತೆಗಳಲ್ಲಿ ದಾರಿ ಸೂಚಕ ಫಲಕ ಅಳವಡಿಕೆ, ನೆಲ್ಲಜಾಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳನ್ನು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಮುದಾಯ ಆರೋಗ್ಯಾಧಿಕಾರಿ ದಯಾನಂದ ಕೆ., ಮೆಸ್ಕಾಂ ಕಿರಿಯ ಇಂಜಿನಿಯರ್ ಪ್ರೇಮ್‌ಕುಮಾರ್, ಸಿಆರ್‌ಪಿ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ವಿಠಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವಾಣಿಶ್ರೀ ಆರ್., ಸಾಮಾಜಿಕ ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ ಕೃಷ್ಣಜೋಗಿ, ಬೀಟ್ ಪೊಲೀಸ್ ಚಂದ್ರಿಕಾ ಅವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ಮಮತಾ, ಫಯಾಝ್, ಕೃಷ್ಣ ವೈ., ಸುಶೀಲ, ಲೀಲಾವತಿ, ಕೆ.ಸದಾನಂದ, ಮೇನ್ಸಿ ಸಾಜನ್, ಬಿ.ಕೆ.ಕುಮಾರ್, ಮೋಹಿನಿ, ಪಿ.ಜಿ.ರಾಜು, ವೇದಾವತಿ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಅವರು ಸ್ವಾಗತಿಸಿ, ವರದಿ ಮಂಡಿಸಿದರು.
ಅಧಿಕಾರಿಗಳೂ ಇಲ್ಲ,..ಗ್ರಾಮಸ್ಥರೂ ಇಲ್ಲ..!!!
ಗ್ರಾಮಸಭೆಗೆ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಹಾಜರಿಯಾಗಿದ್ದರು. ಇದನ್ನು ಪ್ರಶ್ನಿಸಲು ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆಯೇ ವಿರಳವಾಗಿತ್ತು. ಗ್ರಾಮಸ್ಥರೂ ಗ್ರಾಮಸಭೆಗೆ ಬರುವ ಉತ್ಸಾಹ ತೋರಿಸಿಲ್ಲ. ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಟ್ಟರೆ ಬೆರಳೆಣಿಕೆಯ ಗ್ರಾಮಸ್ಥರು ಮಾತ್ರ ಉಪಸ್ಥಿತರಿದ್ದರು. ಈ ವಿಚಾರವನ್ನು ಅಧ್ಯಕ್ಷೀಯ ಭಾಷಣದ ವೇಳೆ ಪ್ರಸ್ತಾಪಿಸಿದ ಅಧ್ಯಕ್ಷ ಮೋಹನ್‌ದಾಸ್ ರೈಯವರು, ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಇಲ್ಲ ಎಂಬುದು ಅರಿವಾಗುತ್ತದೆ ಎಂದರು. ನರೇಗಾ ಯೋಜನೆಯಿಂದ ಗ್ರಾಮದ 144 ಮಂದಿ ಪ್ರಯೋಜನ ಪಡೆದುಕೊಂಡಿದ್ದು ಇದರಲ್ಲಿ ಶೇ.50ರಷ್ಟು ಫಲಾನುಭವಿಗಳು ಬರುತ್ತಿದ್ದರೂ ಆಗುತ್ತಿತ್ತು ಎಂದರು. ಗ್ರಾಮದಲ್ಲಿ ಸಾಧ್ಯವಾದಷ್ಟು ಕಾಮಗಾರಿ ಮಾಡಿದ್ದೇವೆ. ಇದಕ್ಕೆ ಅನುದಾನ ಒದಗಿಸಿದ ಸಚಿವರಿಗೆ, ಇಲಾಖೆಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.