ಕಾಪಿನಬಾಗಿಲು: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಮೂಡುಬೈಲು ಎಂಬಲ್ಲಿ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮದ್ಯದ ಪ್ಯಾಕ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮದ್ಯ ಸಮೇತ ಬಂಧಿಸಿದ ನೆಲ್ಯಾಡಿ ಪೊಲೀಸರು.
ಆರೋಪಿ ಮಾರ್ಚ್ 26ರಂದು ಕೊಕ್ಕಡ-ಧರ್ಮಸ್ಥಳ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮದ್ಯದ ಪ್ಯಾಕ್ ಗಳನ್ನು ಇರಿಸಿಕೊಂಡು ಗಿರಾಕಿಗಳಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ನೆಲ್ಯಾಡಿ ಹೊರಠಾಣೆಯ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆತನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯಗಳನ್ನು ಗಿರಾಕಿಗೆ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ, ಪ್ಲಾಸ್ಟಿಕ್ ಚೀಲದಲ್ಲಿದ್ದ ಮೈಸೂರ್ ಲ್ಯಾನ್ಸರ್ ವಿಸ್ಕಿ 90 ಎಂಎಲ್ ನ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ 96 ಇದ್ದು ಒಟ್ಟು 8,640 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು. ಮದ್ಯದ ಒಟ್ಟು ಅಂದಾಜು ಮೌಲ್ಯ ರೂ 3,360/ ಆಗಿದೆ.
ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕರಾದ ಸುಧಾಕರ ತೋನ್ಸೆ, ನೆಲ್ಯಾಡಿ ಹೂರ ಠಾಣೆ ಹೆಡ್‍ಕಾನ್‍ಸ್ಟೇಬಲ್ ಗಳಾದ ಕುಶಾಲಪ್ಪ ನಾಯ್ಕ, ಬಾಲಕೃಷ್ಣ, ಇಲಾಖಾ ಜೀಪು ಚಾಲಕರಾದ ನಾಗರಾಜ್ ಪಾಲ್ಗೊಂಡಿದ್ದರು.