ಬೆಳ್ತಂಗಡಿ : ಜನಪದ ಕಲಾವಿದ, ತುಳು ಸಿರಿ ಕಾವ್ಯದ ಕಣಜ ಎಂದೇ ಖ್ಯಾತರಾಗಿದ್ದ ಬೆಳಾಲು ಗ್ರಾಮದ ಮಾಚಾರು ಗೋಪಾಲ ನಾಯ್ಕ(85) ಅಸೌಖ್ಯದಿಂದ ಸ್ವಗೃಹದಲ್ಲಿ ಏ.24ರಂದು ನಿಧನ ಹೊಂದಿದರು.
ಜಾನಪದ ಕ್ಷೇತ್ರದಲ್ಲಿನ ಇವರ ಸೇವೆಗೆ 2005ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯು ದೊರಕಿತ್ತು. ಸಿರಿ ಸಂಧಿಯಲ್ಲಿರುವ 15,683 ಸಾಲುಗಳ ದೀರ್ಘ ಪಠ್ಯವನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಸಿರಿ ಜಾತ್ರೆಗಳಲ್ಲಿ ನಡೆಯುವ ದಲ್ಯ ಆಚರಣೆಗಳಲ್ಲಿ ಇವರ ಸಿರಿ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ.
ಜನಪದ ಪುರಾಣಗಳು ಮತ್ತು ಪರಂಪರೆಯ ಕುರಿತ ಅಪಾರ ತಿಳುವಳಿಕೆ ಹೊಂದಿದ್ದ ಇವರ ಸಿರಿ ಕಾವ್ಯದ ಕಥೆಯ ನಡಿಗೆ, ಅದರ ಕಥೆಗಳನ್ನು ಘಟಕಗಳನ್ನಾಗಿ ವಿಂಗಡಿಸಿ ಮರು ಕಟ್ಟುವ ಕಲೆ, ವರ್ಣನೆಯನ್ನು ಪರಂಪರೆಯಿಂದ ಆಯ್ದು ಅಳವಡಿಸುತ್ತಿದ್ದರು.ನಂಬಿಕೆ-ನಡವಳಿಕೆಗಳ ಕೃಷಿ ಕ್ಷೇತ್ರ, ಆರಾಧನಾ ಪದ್ಧತಿಗಳನ್ನು ಅವರು ಸಂಧಿ-ಪಾಡ್ದನಗಳ ಮೂಲಕ ಸುಶ್ರಾವ್ಯವಾಗಿ ಹಾಡಿ ವಿವರಿಸುತ್ತಿದ್ದರು. ಕಾವ್ಯ ಕಟ್ಟುವ ಕಲೆ ಅವರಿಗೆ ಸಿದ್ಧಿಸಿತ್ತು. ಸಿರಿ, ಕುಮಾರ, ಸೊನ್ನೆ, ಅಬ್ಬಗ-ದಾರಗ, ಕಾಂತುಪೂಂಜ ಮೊದಲಾದ ಪಾತ್ರಗಳ ನೈಜ ಚಿತ್ರಣ ಅವರ ಸಂಧಿಗಳಲ್ಲಿ ಅಡಕವಾಗಿದೆ. ಬಾಯ್ದೆರೆಯಾಗಿ ಸಾವಿರಾರು ಸಂಧಿ-ಪಾಡ್ದನಗಳನ್ನು ಹಾಡುವುದು ಅವರ ವಿಶೇಷತೆಯಾಗಿತ್ತು. ಫಿನ್ಲೇಂಡ್‍ನ ಖ್ಯಾತ ಜಾನಪದ ವಿದ್ವಾಂಸರಾದ ಲೌರಿಹೋಂಕೊ ಮತ್ತು ಅನ್ನೆಲಿ ಹೋಂಕೊ 1990ರಲ್ಲಿ ಧರ್ಮಸ್ಥಳಕ್ಕೆ ಬಂದವರು ಆಸಕ್ತಿಯಿಂದ ಗೋಪಾಲ ನಾಯ್ಕರ ಸಂಧಿ-ಪಾಡ್ದನಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ಪ್ರೊ.ಬಿ.ಎ.ವಿವೇಕ ರೈ, ಡಾ.ಕೆ.ಚಿನ್ನಪ್ಪ ಗೌಡ ಸಿರಿ ಕಾವ್ಯ ಯೋಜನೆಯಲ್ಲಿ ಸಹಕರಿಸಿದರು. ಸುಮಾರು ಎಂಟು ವರ್ಷಗಳ ಅಧ್ಯಯನ ಮತ್ತು ದಾಖಲೀಕರಣದ ಬಳಿಕ ಗೋಪಾಲ ನಾಯ್ಕರಿಂದ ಸಿರಿ ಸಂಧಿಗಳನ್ನು ಹಾಡಿಸಿ ದೀರ್ಘವಾದ ಪಠ್ಯವನ್ನು ಅವರು ದಾಖಲಿಸಿಕೊಂಡರು.
ಸಿರಿಕಾವ್ಯ ಪಠ್ಯದ ಎರಡು ಸಂಪುಟಗಳು ಇಂಗ್ಲೀಷ್ ಗೆ ಭಾಷಾಂತರಗೊಂಡಿವೆ. ಈ ವಿಶಿಷ್ಟ ಯೋಜನೆಗೆ ಧರ್ಮಸ್ಥಳದ ವತಿಯಿಂದ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ನೀಡಿದ್ದಾರೆ. ವಿಶ್ವದ ಜಾನಪದ ಲೋಕಕ್ಕೆ ಇದೊಂದು ಅಮೂಲ್ಯ ಕೊಡುಗೆಯಾಗಿದೆ.
ಅವರಿಗೆ ಪತ್ನಿ, ಪುತ್ರ ಹಾಗೂ ನಾಲ್ವರು ಪುತ್ರಿಯರಿದ್ದಾರೆ.