ಎ.29ರಂದು ಆರ್ಡಿ ಶ್ರೀ ದುರ್ಗಾಪರಮೇಶ್ವರಿ ಸಿದ್ಧಿವಿನಾಯಕ ಚಿತ್ತೇರಿ ದೇವಳದಲ್ಲಿ “ಚಿತ್ತೇರಿ ಹಬ್ಬ”

ಶೇರ್ ಮಾಡಿ

ಆರ್ಡಿ:ಹೆಬ್ರಿ ಬಳಿಯ ಆರ್ಡಿ ಶ್ರೀ ದುರ್ಗಾಪರಮೇಶ್ವರಿ ಸಿದ್ಧಿವಿನಾಯಕ ಚಿತ್ತೇರಿ ದೇವಳದಲ್ಲಿ ಕೆಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.29ರಂದು ಶನಿವಾರ ನಡೆಯಲಿದೆ.

ಪುರಾತನ ಕಾಲದಿಂದಲೂ ಹಿರಿಯರು ಆರಾಧಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ದೇವಳವು ಹೆರ್ಗ ವಿಠಲ ಶೆಟ್ಟಿ ಅವರ ಪತ್ನಿ ಕಮಲ ವಿ.ಶೆಟ್ಟಿ ಹಾಗೂ ಇವರ ಮಕ್ಕಳ ಮುಂದಾಳತ್ವದಲ್ಲಿ ಊರ-ಪರವೂರ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಶಿಲಾಮಯ ಗರ್ಭಗುಡಿ, ಮೇಲ್ಛಾವಣಿಗೆ ತಾಮ್ರದ ಹೊದಿಕೆಯೊಂದಿಗೆ ಜೀರ್ಣೋದ್ದಾರಗೊಂಡು, ತಾ.29.4.1990 ರಂದು ಬ್ರಹ್ಮಕಲಶೋತ್ಸವದೊಂದಿಗೆ ಪುನರ್ ಪ್ರತಿಷ್ಠಾಪನೆಗೊಂಡಿದೆ.

ಸಾನ್ನಿಧ್ಯಗಳು:
ಶ್ರೀ ದುರ್ಗಾಪರಮೇಶ್ವರಿ, ಸಿದ್ಧಿ ವಿನಾಯಕ, ಚಿತ್ತೇರಿ,ಹೈಗುಳಿ, ಚಿಕ್ಕು, ಕಲ್ಲುಕುಟಿಕ,ಮಾಸ್ತಿ, ನಾಗದೇವರು,ಹುಲಿ ದೇವರು, ವೀರಭದ್ರ ಹಾಗೂ ಸಪರಿವಾರ ದೇವರ ಸಾನ್ನಿಧ್ಯ ಇರುವ ಕ್ಷೇತ್ರ ಇದು.

ಪೂಜಾ ವಿಧಿಗಳು:
ಚಂಡಿಕಾ ಹೋಮ, ದುರ್ಗಾ ನಮಸ್ಕಾರ, ಮಂಗಳಾರತಿ, ಕುಂಕುಮಾರ್ಚನೆ, ಹೂವಿನ ಪೂಜೆ, ಹರಿವಾಣ ನೈವೇದ್ಯ, ಕೆಂಡ ಸೇವೆ, ತುಲಾಭಾರ ಸೇವೆ, ಗಣಹೋಮ, ಸಿಂಹ ಮಾಸದಲ್ಲಿ ಸೋಣೆ ಆರತಿ, ಗಣೇಶ ಚತುರ್ಥಿ, ನವರಾತ್ರಿಯಲ್ಲಿ ವಿಶೇಷ ಪೂಜೆಗಳು ಇಲ್ಲಿ ನಡೆಯುತ್ತದೆ.

ಇಲ್ಲಿನ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಸತತ 42 ವರ್ಷಗಳಿಂದ ಭಜನಾ ಕಾರ್ಯಕ್ರಮ ನಡೆದು ಬಂದಿರುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ನಿತ್ಯ ಪೂಜೆಗಳು ನಡೆಯುತ್ತವೆ. ದೇವಳದಲ್ಲಿ ಮದುವೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು
ನಡೆಯುತ್ತವೆ. ದೇವಳದ ಸಮೀಪ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಕಮಲ ವಿಠ್ಠಲ ಸಭಾಭವನವನ್ನು ಹೊಂದಿದೆ. ಕೆಂಡೋತ್ಸವದಂದು ದೇಗುಲದಲ್ಲಿ ನಡೆಯುವ ಕಲ್ಲುಕುಟಿಗನ ಕೋಲವು ಹಿಂದಿನಿಂದಲೂ ಬಹಳ ವಿಶೇಷತೆಯನ್ನು ಪಡೆದಿದೆ. ಪುರಾತನ ಕಾಲದಲ್ಲಿ ಮೂಡಿ ಬಂದ ಇಲ್ಲಿನ ಚಿತ್ತೇರಿ ದೇವರ ವಾಲ್ಮೀಕ(ಹುತ್ತ) ಆಳೆತ್ತರಕ್ಕೆ ಬೆಳೆದಿರುವುದು ಇಲ್ಲಿನ ವಿಶೇಷ ಆಕರ್ಷಣೆ. ಸುತ್ತ ಮುತ್ತಲಿನ ಭಾಗಗಳಲ್ಲಿ “ಚಿತ್ತೇರಿ ಹಬ್ಬ” ವೆಂದು ಬಹು ಪ್ರಸಿದ್ಧಿ ಪಡೆದಿದೆ.

ಕೆಂಡೋತ್ಸವದ ಪ್ರಯುಕ್ತ ಕಾರ್ಯಕ್ರಮಗಳು:
ಬೆಳಿಗ್ಗೆ ಗಂ.8ಕ್ಕೆ ಪುಣ್ಯಾಹ, ನವಕ ಪ್ರಧಾನಹೋಮ, ಕಲಶಾಭಿಷೇಕ, ಗಂ.8.30ಕ್ಕೆ ಗಣಹೋಮ, ಗಂ.10ಕ್ಕೆ ತುಲಾಭಾರ ಸೇವೆಗಳು, ಹರಿವಾಣ ನೈವೇದ್ಯ, ಗಂ.12 ಕ್ಕೆ ಮಹಾಪೂಜೆ, ಗಂ.1.00 ರಿಂದ ಅನ್ನಸಂತರ್ಪಣೆ, ರಾತ್ರಿ ಗಂ.8.30 ರಿಂದ ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪ್ರಾಯೋಜಕತ್ವದಲ್ಲಿ ಅಭಿನವಕಲಾತಂಡ ಕುಂದಾಪುರ ಇವರಿಂದ ರತ್ನ ಶಾಮಿಯಾನ ನಗೆ ನಾಟಕ, ರಾತ್ರಿ ಗಂ.12ಕ್ಕೆ ಕೆಂಡಸೇವೆ, ಗಂ.1.00ಕ್ಕೆ ಕಲ್ಲುಕುಟಿಗನ ಕೋಲ, ದರ್ಶನ, ಗಂ.3ಕ್ಕೆ ರಂಗ ಪೂಜೆ, ಗಂ.4ಕ್ಕೆ ಢಕ್ಕೆಬಲಿ, ಗಂ.5ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.

Leave a Reply

error: Content is protected !!