ಬೆಳ್ತಂಗಡಿ : ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜ ಅವರು ಹಿಂದುತ್ವದ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ. “ಶಾಸಕ ಹರೀಶ್ ಪೂಂಜಾ ಓರ್ವ ಬಚ್ಚಾ, ಅವರು ತನ್ನ ಹುಡುಗರಿಗೆ ಕೇಸರಿ ಶಾಲು ಹಾಕಿಸಿ ಗೋವುಗಳನ್ನು ಇಂದು ಕಸಾಯಿಖಾನೆಗೆ ತಲುಪಿಸುವ ಕೆಲಸ ಮಾಡಿಸುತ್ತಿದ್ದಾರೆ” ಎಂದು ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ ಮಾಡಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಶಾಸಕ ಪೂಂಜಾ ಸಾರ್ವಜನಿಕ ಸಭೆಯಲ್ಲಿ ತಮ್ಮ ವಿರುದ್ದ ಮಾಡಿದ ಆರೋಪಗಳಿಗೆ ಉತ್ತರಿಸಿ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಹರೀಶ್ ಪೂಂಜಾ ಹಿಂದೂ ಸಮಾಜಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು ವೋಟು ಖರೀದಿ ಮಾಡಿ ಆಗಿರುವ ಜನನಾಯಕ. ತನ್ನ ಹುಡುಗರಿಗೆ ಕೇಸರಿ ಶಾಲು ಹಾಕಿಸಿ ಗೋವುಗಳನ್ನು ಇಂದು ಕಸಾಯಿಖಾನೆಗೆ ತಲುಪಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಹರೀಶ್ ಪೂಂಜಾ ಅವರು ಬೆಳ್ತಂಗಡಿ ಶಾಸಕರಾಗಿ ಅಧಿಕಾರ ಸ್ವೀಕರಿಸಿದ ನಂತರ ತಾಲೂಕಿನಲ್ಲಿ ಮತಾಂತರ, ಗೋಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಅವರ ಕಚೇರಿಯಿಂದಲೇ ಬಿಜೆಪಿ ಮುಖಂಡ ಮಂಡಿ ಗಣೇಶ್ ಎಂಬವರೇ ದನ ಸಾಗಾಟದಲ್ಲಿ ತೊಡಗಿದ್ದಾರೆ. ಹಲವು ಗ್ರಾಮಗಳಲ್ಲಿ ಇದು ನಡೆಯುತ್ತಿದೆ. ಇಂತಹವರನ್ನು ಹಿಡಿದ ಎಷ್ಟೋ ಉದಾಹರಣೆಗಳಿವೆ. ಸಾಕ್ಷಿ ಸಮೇತ ಸಾಬೀತುಪಡಿಸುತ್ತೇವೆ. ಹರೀಶ್ ಪೂಂಜರ ಮನೆಯ ಸಮೀಪವೇ ಅಕ್ರಮವಾಗಿ ದನ ಕಡಿಯುವ ಕಾರ್ಯ ನಡೆಯುತ್ತಿದೆ. ಇದು ಹರೀಶ್ ಪೂಂಜರಿಗೆ ತಿಳಿದಿದ್ದರೂ ಅವರು ಬೆಂಬಲ ನೀಡುತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಪೂಂಜಾ ಅವರು ಜಾತಿ ಆಧಾರದ ಮೇಲೆ ತಾಲೂಕನ್ನು ವಿಭಜಿಸಿ ಒಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದನ ಕಡಿಯು ಕೆಲಸ ಮಾಡುವ ಕ್ರೈಸ್ತ ವ್ಯಕ್ತಿಯೊಬ್ಬನನ್ನು ಬಿಜೆಪಿಯ ನಾಯಕನನ್ನಾಗಿ ಮಾಡಿ, ಅವನು ಬಿಜೆಪಿ ಎಂದು ಕೇಸರಿ ಶಾಲು ಹಾಕಿ ತಿರುಗುತ್ತಾನೆ. ಇದು ಕೇಸರಿ ಶಾಲು ಹಾಗೂ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ ಹರೀಶ್ ಪೂಂಜನ ಕಾರ್ಯಕರ್ತರು ಕೇಸರಿಯನ್ನು ಅಪಮಾನಿಸುತ್ತಿದ್ದಾರೆ ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ. ಪೂಂಜನ ರಾಜಕೀಯ ದಿಂದಾಗಿ ತಾಲೂಕಿನ ದೇವಸ್ಥಾನಗಳಲ್ಲಿ ಬ್ರಹ್ಮಕಲಶವೇ ಸರಿಯಾಗಿ ನಡೆದಿಲ್ಲ. ಇದು ತಾಲೂಕಿಗೆ ಶಾಪವಾಗಿ ಪರಿಣಮಿಸಲಿದೆ ಎಂದು ಅವರು ಹೇಳಿದರು.
ಹರೀಶ್ ಪೂಂಜ ಅವರು ವೇದಿಕೆಯಲ್ಲಿ ತನಗೆ ಮುಸ್ಲಿಮರ ಮತ ಬೇಡ ಎಂದು ಹೇಳಿ ಹಿಂದುಗಳನ್ನು ದಾರಿತಪ್ಪಿಸಿ ಮುಸ್ಲಿಮರಿಗೆ, ಕ್ರೈಸ್ತರಿಗೆ ನೆರವಾಗಿದ್ದಾರೆ. ಅವರಿಗೆ ಕೊಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಹಿಂದೂಗಳ ಮುಂದೆ ಬಂದು ಸುಳ್ಳು ಹೇಳುವುದು ಯಾಕೆ. ಇಂತಹ ಇಬ್ಬಗೆಯ ನೀತಿಯನ್ನು ಅಂದಿನಿಂದಲೂ ಹರೀಶ್ ಪೂಂಜ ಅನುಸರಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ಹರೀಶ್ ಪೂಂಜಾ ಅವರು ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ಅವರು 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿಸಿದ್ದಾರೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಶಾಸಕ ಹರೀಶ್ ಪೂಂಜಾ ವಿರುದ್ದ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ ಇಲ್ಲವಾದರೆ ಈ ಆರೋಪ ಒಪ್ಪಿಕೊಂಡು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲಿ. ಶಾಸಕನಾಗಿ ಎಲ್ಲರನ್ನು ಸಮಾನವಾಗಿ ಕೊಂಡೊಯ್ಯುವೆಡೆಗೆ ನಿಮ್ಮ ನಡೆ ಇರಲಿ. ಸಿದ್ದರಾಮಯ್ಯ ಕೊಲೆ ಮಾಡಿದ್ದು ಸರಿಯಾದರೆ ಕಳೆದ ಐದು ವರ್ಷ ಹರೀಶ್ ಪೂಂಜ ಏನು ಮಾಡುತ್ತಿದ್ದರು. ಬಿಜೆಪಿ ಸರಕಾರ ಏನುಮಾಡುತ್ತಿತ್ತು. ಈಗ ಹರೀಶ್ ಪೂಂಜನಿಗೆ ಜ್ಞಾನೋದಯವಾಗಿದೆಯಾ ಎಂದು ಪ್ರಶ್ನಿಸಿದರು. ಅದು ಬಿಟ್ಟು ಕೇಸರಿ ಶಾಲು ಹೆಗಲಿಗೇರಿಸಿ ಸುಳ್ಳು ಹೇಳಿಕೆ ನೀಡಿ ನೀವ್ಯಾಕೆ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದೀರಿ” ಎಂದು ಪ್ರಶ್ನಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಶಾಸಕ ಪೂಂಜಾ ಸುಳ್ಳು ಆರೋಪ ಮಾಡಿದ್ದರೆ ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ” ಎಂದು ಸವಾಲ್ ಹಾಕಿದ್ದಾರೆ.
ಸಾಮಾಜದ ಮದ್ಯೆ ಸುಳ್ಳು ಹೇಳಿಕೆ ನೀಡಿ ಸಮಾಜದ ಒಡೆಯುವ ಕೆಲಸ ಮಾಡಿದ ಶಾಸಕರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಂಘಟನೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖಂಡರು ಉಪಸ್ಥಿತರಿದ್ದರು