ಉಪ್ಪಿನಂಗಡಿ- ಪುತ್ತೂರು ಹೆದ್ದಾರಿ ಕಾಮಗಾರಿ: ಶಾಸಕ ಅಶೋಕ್ ಕುಮಾರ್ ಪರಿಶೀಲನೆ

ಶೇರ್ ಮಾಡಿ

ಉಪ್ಪಿನಂಗಡಿ: ಕಳೆದ ಕೆಲ ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಉಪ್ಪಿನಂಗಡಿ -ಪುತ್ತೂರು ರಸ್ತೆಯ ಚತುಷ್ಪಥ ಕಾಮಗಾರಿಯ ಡಿವೈಡರ್ ಹಾಗೂ ಚರಂಡಿ ನಿರ್ಮಾಣ ಕಾರ್ಯ ಮುಂದಿನ 20 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕೆಂದು ಪುತ್ತೂರಿನ ನೂತನ ಶಾಸಕ ಅಶೋಕ್ ಕುಮಾರ್ ರೈ ನಿರ್ದೇಶನ ನೀಡಿದ್ದಾರೆ.

ಗುರುವಾರ ಕಾಮಗಾರಿಯ ವಿಚಾರವಾಗಿ ಸಾರ್ವಜನಿಕರ ದೂರುಗಳನ್ನು ಆಲಿಸಿ ಸ್ಥಳ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯ ಪೃಥ್ವಿ ಎಂಬವರೊಡನೆ ಕಾಮಗಾರಿಯ ಸ್ಥಿತಿಗತಿಯನ್ನು ವಿಚಾರಿಸಿದರಲ್ಲದೆ, ಡಿವೈಡರ್ ನಿರ್ಮಾಣಕ್ಕೆಂದು ರಸ್ತೆ ಮಧ್ಯ ಭಾಗದಲ್ಲಿ ಕಾಂಕ್ರೀಟ್ ಬ್ಲಾಕ್ ಗಳನ್ನು ತಂದು ಹಾಕಲಾಗಿದೆ. ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರು ಇದಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆ ಇರುವುದರಿಂದ ತಕ್ಷಣವೇ ಅದರ ವಿಲೇವಾರಿಯಾಗಬೇಕು ಎಂದರು.
ರಸ್ತೆಯುದ್ದಕ್ಕೂ ಚರಂಡಿಗಳ ನಿರ್ಮಾಣವಾಗದೇ ಇರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದಾಡಿ ಡಾಮರೀಕರಣವೂ ಹಾನಿಗೀಡಾಗಲಿದೆ. ಈ ಕಾರಣಕ್ಕೆ ಚರಂಡಿಯ ನಿರ್ಮಾಣವನ್ನೂ ಆದ್ಯತೆಯಲ್ಲಿ ಮಾಡಿ ಮುಗಿಸಬೇಕು. ಕಾಟಾಚಾರಕ್ಕೆ ಒಂದಿಬ್ಬರು ಸಿಬ್ಬಂದಿಯನ್ನು ಬಳಸಿ ಇಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇಂತಹ ಆಟ ಇನ್ನು ಬೇಡ. ಗರಿಷ್ಟ ಸಂಖ್ಯೆಯ ಸಿಬ್ಬಂದಿಯನ್ನು ಬಳಸಿಕೊಂಡು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದರು.

ರಸ್ತೆ ಅಗಲೀಕರಣದ ಸಮಯದಲ್ಲಿ ಎಲ್ಲೆಲ್ಲಾ ಚರಂಡಿ ವ್ಯವಸ್ಥೆಗಳು ಹಾನಿಗೀಡಾಗಿ ಕೃಷಿ ಪ್ರದೇಶಗಳಿಗೆ ಚರಂಡಿ ನೀರು ನುಗ್ಗುತ್ತಿದೆಯೋ ಅಲ್ಲೆಲ್ಲಾ ಸುವ್ಯವಸ್ಥಿತ ಚರಂಡಿ ವ್ಯವಸ್ಥೆಯನ್ನು ನಿರ್ಮಿಸಬೇಕೆಂದರು. ಮನೆಗೆ ಹಾನಿಯಾಗುವಂತಹ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಗಮನ ಹರಿಸಲು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜಾರಾಮ್, ಕಿರಿಯ ಅಭಿಯಂತರರಾದ ಕಾನಿಷ್ಕ ರವರು ಇಲಾಖಾತ್ಮಕ ಮಾಹಿತಿಗಳನ್ನು ಶಾಸಕರಿಗೆ ನೀಡಿದರು.
ಶಾಸಕರೊಂದಿಗೆ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ., ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಕಾಂಗ್ರೆಸ್ ಪ್ರಮುಖರಾದ ಉಮಾನಾಥ ಶೆಟ್ಟಿ ಪೆರ್ನೆ, ಅನಿ ಮಿನೇಜಸ್, ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ಅಜೀಜ್ ಬಸ್ತಿಕಾರ್, ನಝೀರ್ ಮಠ, ಆದಂ ಕೊಪ್ಪಳ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!