ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಕಾಲ ಸನ್ನಿಹಿತವಾಗಿದ್ದು, ನೂತನ ಸರಕಾರ ಚುನಾವಣೆ ನಡೆಸುವತ್ತ ಮುಂದಡಿ ಇಟ್ಟಂತೆ ಕಂಡುಬರುತ್ತಿದೆ. ಅದಕ್ಕೆ ಪೂರಕವೆಂಬಂತೆ ಮೀಸಲಾತಿ ನಿಗದಿಪಡಿಸುವ ನ್ಯಾಯಾ ಲಯದ ಆದೇಶ ಪಾಲಿಸುವ ದಿಸೆಯಲ್ಲಿ ಹೈಕೋರ್ಟ್‌ಗೆ ಸರಕಾರ 4 ವಾರಗಳ ಸಮಯ ಕೇಳಿದೆ.
ವಿಚಾರಣೆ ವೇಳೆ ಸರಕಾರದ ಪರ ಹಾಜರಾದ ನೂತನ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಜಿ.ಪಂ.- ತಾ.ಪಂ. ಚುನಾವಣೆ, ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶದಲ್ಲಿನ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಪಾಲಿಸಲು ಸ್ವಲ್ಪ ಸಮಯ ಬೇಕು. 4 ವಾರ ಕಾಲಾವಕಾಶ ನೀಡಿ ಎಂದು ಕೋರಿದರು. ಇದಕ್ಕೆ ಒಪ್ಪಿದ ನ್ಯಾಯ ಪೀಠ, ವಿಚಾರಣೆಯನ್ನು ಜೂ.28ಕ್ಕೆ ಮುಂದೂಡಿತು.