ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಐದನೆಯ ವಾರ್ಷಿಕೋತ್ಸವವನ್ನು ಸಂತ ಅಲ್ಫೊನ್ಸಾ ಚರ್ಚ್ ಹಾಲ್ ನಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪೂರ್ವತನ ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ್ ಸೊರಕೆ ಅವರು ಆಗಮಿಸಿದ್ದರು. ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು ನೇಲ್ಯಾಡಿಯ ಈ ಗ್ರಾಮೀಣ ಪ್ರದೇಶದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಕಳೆದ ಐದು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಸಂದರ್ಭಗಳನ್ನ ಸ್ಮರಿಸಿಕೊಂಡರು. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಸ್ವತಃ ತಾವು ಈ ಕಾಲೇಜು ಸ್ಥಾಪನೆಯ ಹಿನ್ನೆಲೆಯಲ್ಲಿ ಪಟ್ಟ ಶ್ರಮ ಮತ್ತು ಸ್ಥಳೀಯವಾಗಿ ನೆಲ್ಯಾಡಿಯ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಉಷಾ ಅಂಚನ್ ನೇತೃತ್ವದ ಹೋರಾಟದ ಫಲವಾಗಿ ಇಂದು ಈ ಕಾಲೇಜು ಈ ಮಟ್ಟಕ್ಕೆ ಬೆಳೆದಿದೆ. ಬದ್ಧತೆ ಮತ್ತು ಆಡಳಿತದ ಅನುಭವದ ಮೂಲಕ ಕಾಲೇಜಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೂರ್ವತನ ಸಂಯೋಜಕರಾದ ಪ್ರೊಫೆಸರ್ ಯತೀಶ್ ಕುಮಾರ್ ಮತ್ತು ಡಾ. ಜಯರಾಜ್ ಎನ್ ಅವರ ಕಾರ್ಯವೈಖರಿಯನ್ನು ಪ್ರಶಂಸಿದರು. ಕಳೆದ ಮಾರ್ಚ್ ನಲ್ಲಿ ಕಾಲೇಜಿನ ನೂತನ ಸಂಯೋಜಕರಾಗಿ ಅಧಿಕಾರ ಸ್ವೀಕರಿಸಿದ ಡಾ.ಸುರೇಶ್ ಅವರನ್ನು ಅಭಿನಂದಿಸಿ ಕಾಲೇಜಿನ ಅಭಿವೃದ್ಧಿಗೆ ಸದಾ ನಿಮ್ಮೊಂದಿಗೆ ಇದ್ದೇವೆ ಎಂದರು. ವಿಶ್ವವಿದ್ಯಾನಿಲಯ ಕಾಲೇಜಿಗೆ ಮೀಸಲಾಗಿರುವ ಮಾದೇರಿಯ 24 ಎಕರೆ ಜಾಗದಲ್ಲಿ ಉತ್ತಮ ಕಟ್ಟಡಗಳೊಂದಿಗೆ ನೂತನ ಕ್ಯಾಂಪಸ್ ನಿರ್ಮಾಣದ ಕನಸುಗಳು ಆದಷ್ಟು ಬೇಗ ಕೆಲವೇ ದಿನಗಳಲ್ಲಿ ನನಸಾಗಲಿವೆ ಎಂದರು.
ಅತಿಥಿಗಳಾಗಿ ಭಾಗಿಯಾಗಿದ್ದ ನೆಲ್ಯಾಡಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಶ್ರೀಮತಿ ಮಂಜುಳಾ ಎನ್ ಅವರು ಮಾತನಾಡುತ್ತಾ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಈ ವಿಶ್ವವಿದ್ಯಾನಿಲಯ ಕಾಲೇಜು ಉನ್ನತ ಶಿಕ್ಷಣದ ಹೆಬ್ಬಾಗಿಲಿದ್ದಂತೆ. ಈ ಭಾಗದ ಮಕ್ಕಳು ತುಂಬಾ ಜಾಣರಿದ್ದು ಉನ್ನತ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರಕಾರಿ ಹುದ್ದೆಗಳಿಗೆ ಆಕಾಂಕ್ಷಿಗಳಾಗಿ ಸಿದ್ಧತೆ ನಡೆಸಿದ್ದಲ್ಲಿ ಖಂಡಿತ ಬೇಗ ಯಶಸ್ವಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ನೆಲ್ಯಾಡಿಯ ಗ್ರಾಮ ಪಂಚಾಯಿತಿಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವಲ್ಲಿ ಸದಾ ಸಿದ್ಧವಿರುತ್ತದೆ ಎಂದರು.
ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲೀಕರ ಸಂಘದ ಅಧ್ಯಕ್ಷರಾದ ಏ ಕೆ ವರ್ಗಿಸ್ ಅವರು ಕಾಲೇಜಿಗೆ ಹತ್ತು ಸಾವಿರ ರೂಪಾಯಿ ಮೌಲ್ಯದ ಫ್ಯಾನ್ ಗಳನ್ನು ಕಾಣಿಕೆಯಾಗಿ ನೀಡಿದರು. ನೆಲ್ಯಾಡಿಯ ಕಟ್ಟಡ ಮಾಲಕರ ಸಂಘವು ಯಾವತ್ತಿಗೂ ಈ ಕಾಲೇಜಿನ ಅಭಿವೃದ್ಧಿಗೆ ಸಹಕಾರ ನೀಡುತ್ತದೆ ಎಂದರು.
ವಾರ್ಷಿಕೋತ್ಸವದ ಈ ಶುಭ ಸಂದರ್ಭದಲ್ಲಿ ಕಾಲೇಜಿನ ಪೂರ್ವತನ ಸಂಯೋಜಕರಾದ ಪ್ರೊಫೆಸರ್ ಯತೀಶ್ ಕುಮಾರ್ ಮತ್ತು ಡಾ.ಜಯರಾಜ್ ಎನ್. ಅವರನ್ನು ಕಾಲೇಜಿನ ನೂತನ ಸಂಯೋಜಕರು, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊಫೆಸರ್ ಯತೀಶ್ ಕುಮಾರ್ ಅವರು ತಾವು 2018ರಲ್ಲಿ ಮೊದಲ ಸಂಯೋಜಕರಾಗಿ ಆಗಮಿಸಿದ ಸಂದರ್ಭವನ್ನು ಸ್ಮರಿಸಿದರು. ಸ್ವಂತ ಕಟ್ಟಡವೇ ಇಲ್ಲದ ಆರಂಭದಲ್ಲಿ ಶ್ರೀಮತಿ ಉಷಾ ಅಂಚನ್ ಅವರ ಬೆಂಬಲ ಹಾಗೂ ಆಡಳಿತ ಕಛೇರಿ ಮತ್ತು ತರಗತಿ ಕೋಣೆಗಳಿಗೆ ಸ್ಥಳಾವಕಾಶ ನೀಡಿ ಕಾಲೇಜಿನ ಬೆಳವಣಿಗೆಗೆ ಸಹಕಾರ ನೀಡಿದ ಸಂತ ಜಾರ್ಜ್ ವಿದ್ಯಾಸಂಸ್ಥೆಗೂ ಮತ್ತು ಸಂಚಾಲಕರಾದ ಅಬ್ರಹಾಂ ವರ್ಗೀಸ್ ಅವರ ಸಹಕಾರವನ್ನು ಸ್ಮರಿಸಿದರು. ಕಳೆದ ಐದು ವರ್ಷಗಳಲ್ಲಿ ಕಾಲೇಜು, ಪರಿಣಿತ ಉಪನ್ಯಾಸ ವೃಂದ ಮತ್ತು ವಿದ್ಯಾರ್ಥಿ ವೃಂದದ ಉತ್ತಮ ಶೈಕ್ಷಣಿಕ ಚಟುವಟಿಕೆಗಳಿಂದ ವಿಶ್ವವಿದ್ಯಾನಿಲಯ ಕಾಲೇಜು ಈ ಹಂತಕ್ಕೆ ಬೆಳೆದದ್ದು ಖುಷಿ ನೀಡಿದೆ. ಆದಷ್ಟು ಬೇಗ ಮಾದೇರಿಯಲ್ಲಿ ಸ್ವಂತ ಕಟ್ಟಡದೊಂದಿಗೆ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಅಣಿಯಾಗಬೇಕಾಗಿದೆ ಎಂದರು. ತಮ್ಮ ಆಡಳಿತಾವಧಿಯಲ್ಲಿ ಕಾಲೇಜಿನ ಬೋಧಕ ವೃಂದದ ಉತ್ತಮ ಸಹಕಾರವನ್ನು ಸ್ಮರಿಸುತ್ತಾ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಮತ್ತಷ್ಟು ಪ್ರಗತಿ ಹೊಂದಲು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮತ್ತೋರ್ವ ಪೂರ್ವತನ ಸಂಯೋಜಕರಾದ ಡಾ. ಜಯರಾಜ್ ಎನ್. ಅವರು ಕೊರೋನಾ ಅವಧಿಯಿಂದ ಕಳೆದ ಮಾರ್ಚ್ 2023ರ ವರೆಗಿನ ತಮ್ಮ ಆಡಳಿತದಲ್ಲಿ ಅನೇಕ ರೀತಿಯಲ್ಲಿ ಸವಾಲುಗಳನ್ನು ಎದುರಿಸಿ ಬೆಳವಣಿಗೆ ಹೊಂದಿದೆ. ಕಟ್ಟಡ ಬದಲಾವಣೆ ಮತ್ತು ಆಂತರಿಕ ಮೂಲಸೌಕರ್ಯಗಳನ್ನು ಹೆಚ್ಚು ಮಾಡಿಕೊಳ್ಳುವುದರ ಮೂಲಕ ಕ್ರೀಡೆ ಮತ್ತು ಶೈಕ್ಷಣಿಕವಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾಲೇಜು ಶೈಕ್ಷಣಿಕವಾಗಿ ಮತ್ತಷ್ಟು ಬೆಳೆಯಲು ಸಾಧ್ಯವಾಯಿತು. ಭೌತಿಕವಾಗಿ ಕಾಲೇಜಿನ ಕ್ಯಾಂಪಸ್ ನಿರ್ಮಾಣದ ಕೆಲಸಗಳಿಗೆ ಸೂಕ್ತ ಸಮಯ ಇದಾಗಿದ್ದು ಅಭಿವೃದ್ಧಿ ಸಮೀತಿಯ ಜವಾಬ್ದಾರಿಯುತ ಕಾರ್ಯಗಳಿಂದ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಇದಿಷ್ಟೇ ಸಾಲದು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉನ್ನತ ಹುದ್ದೆಗಳೊಂದಿಗೆ ಕಾಲೇಜಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ಒದಗಿಸಿಕೊಡುವ ವಿಶ್ವವಿದ್ಯಾನಿಲಯದ ಆಶಯವನ್ನು ಪ್ರಸ್ತಾಪಿಸುತ್ತ ಮುಂದಿನ ದಿನಗಳಲ್ಲಿ ಸ್ವಂತ ಕ್ಯಾಂಪಸ್ ನೊಂದಿಗೆ ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ಸಿನ ಸೌಕರ್ಯ ಮತ್ತು ಉತ್ತಮವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಲು ಕಾಲೇಜಿನ ಆಡಳಿತ ವರ್ಗ ಮತ್ತು ಉಪನ್ಯಾಸ ವೃಂದ ಸದಾ ಸಿದ್ಧರಿದ್ದು ಈ ಭಾಗದಲ್ಲಿ ಉತ್ತಮವಾದ ಉನ್ನತ ಶಿಕ್ಷಣದ ವಿದ್ಯಾಸಂಸ್ಥೆಯಾಗಿ ಈ ಕಾಲೇಜು ಬೆಳೆಯುತ್ತದೆ ಎಂದರು.
ಸಮಾರಂಭದಲ್ಲಿ ಕಾಲೇಜಿನ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್, ಕಟ್ಟಡ ಮಾಲಕರ ಸಂಘದ ಕಾರ್ಯದರ್ಶಿ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಕಟ್ಟಡದ ಮಾಲಕರಾದ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ವರ್ತಕರ ಸಂಘದ ಸದಸ್ಯರಾದ ಸತೀಶ್ ದುರ್ಗಾಶ್ರೀ, ಗಣೇಶ ರಶ್ಮಿ, ವಿಶ್ವವಿದ್ಯಾನಿಲಯ ಕಾಲೇಜಿನ ಅನುಷ್ಠಾನ ಸಮಿತಿಯ ಕೋಶಾಧಿಕಾರಿಯಾಗಿರುವ ವಿಶ್ವನಾಥ ಶೆಟ್ಟಿ, ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಅಬ್ದುಲ್ ಖಾದರ್, ಉಪಾಧ್ಯಕ್ಷೆಯಾದ ಶ್ರೀಮತಿ ಮಧುರಾ, ನ್ಯಾಯವಾದಿಗಳಾದ ಶ್ರೀ ಇಸ್ಮಾಯಿಲ್ ನೆಲ್ಯಾಡಿ, ಪಂಚಾಯತ್ ಕಾರ್ಯದರ್ಶಿಯಾದ ಅಂಗು, ವಿದ್ಯಾರ್ಥಿ ಸಂಘದ ಸಂಚಾಲಕರಾದ ಸುರೇಶ್ ಕೆ, ಲಲಿತ ಕಲಾ ಸಂಘದ ಸಂಚಾಲಕರಾದ ಶ್ರೀಮತಿ ದಿವ್ಯಶ್ರೀ ಜಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್, ಲಲಿತ ಕಲಾ ಸಂಘದ ಕಾರ್ಯದರ್ಶಿನಿ ಕುಮಾರಿ ಅರ್ಪಿತ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಹೇಮಾವತಿ ಅವರು ಕಾಲೇಜಿನ ಪೂರ್ವತನ ಮತ್ತು ನೂತನ ಸಂಯೋಜಕರ ಮಾದರಿ ಆಡಳಿತ ಸೇವೆ ಕುರಿತ ತಮ್ಮ ಸ್ವರಚಿತ ಕವನ ವಾಚಿಸಿದರು. ಉಪನ್ಯಾಸಕರಾದ ಡಾ.ನೂರಂದಪ್ಪ ಸರ್ವರನ್ನು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ವೆರೋಣಿಕಾ ಪ್ರಭ ಮತ್ತು ಶ್ರೀಮತಿ ದಿವ್ಯಶ್ರೀ ಜಿ. ನಿರೂಪಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ದಿವ್ಯ ಕೆ. ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ನಿಶ್ಮಿತಾ ಪಿ. ಮತ್ತು ಇಂಗ್ಲೀಷ್ ವಿಭಾಗದ ಉಪನ್ಯಾಸಕಿಯಾದ ವನಿತಾ ಪಿ. ಅವರು ಗೌರವ ಸನ್ಮಾನ ನೆರವೇರಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕಿಯಾದ ಶೃತಿ ಮತ್ತು ಕನ್ನಡ ಉಪನ್ಯಾಸಕರಾದ ಡಾ.ನೂರಂದಪ್ಪ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕ್ರೀಡಾ ವಿಭಾಗದಿಂದ ಕ್ರೀಡಾಕೂಟದ ವಿಜೇತರ ಬಹುಮಾನ ವಿತರಣೆಯನ್ನು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಆನಂದ್ ಕೆ. ನಿರ್ವಹಿಸಿದರು. ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ಬಹುಮಾನ ವಿತರಣೆಯನ್ನು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಡೀನಾ ಪಿ.ಪಿ ಮತ್ತು ಸ್ಪೂರ್ತಿ ಕೆ.ಟಿ ಅವರು ನಡೆಸಿಕೊಟ್ಟರು. ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ. ಸೀತಾರಾಮ್ ಪಿ. ವಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕುಮಾರಿ ಮುರ್ಷಿದಾ ಮತ್ತು ಕುಮಾರಿ ಅರ್ಪಿತ ನಿರ್ವಹಿಸಿದರು.