ಬೆಳ್ತಂಗಡಿ: ವೇಣೂರು ಹೋಬಳಿಯ ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲ್ಯ ಸಮೀಪ ಗದ್ದೆಯಲ್ಲಿ ವಾಲಿ ನಿಂತ ವಿದ್ಯುತ್ ಕಂಬಗಳ ತಂತಿಗಳು ತಾಗಿ ಮೂರು ದನಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಪಿಲ್ಯದ ಲಾರೆನ್ಸ್ ಪಿರೇರಾ ಅವರಿಗೆ ಸೇರಿದ ದನಗಳು ಇದಾಗಿದ್ದು, ಗದ್ದೆಗೆ ದನಗಳನ್ನು ಮೇಯಲು ಬಿಟ್ಟಿದ್ದರು ಎನ್ನಲಾಗಿದೆ. ವಿಶಾಲವಾಗಿದ್ದ ಗದ್ದೆಯಲ್ಲಿ ನೀರು ತುಂಬಿದ್ದ ಕಾರಣ ತಂತಿಗಳು ಜೋತುಬಿದ್ದ ವಿಚಾರ ಲಾರೆನ್ಸ್ ಅವರ ಗಮನಕ್ಕೆ ಬಂದಿರಲಿಲ್ಲ. ದನಗಳು ಮೇಯುತ್ತ ವಾಲಿ ನಿಂತ ವಿದ್ಯುತ್ ಕಂಬಕ್ಕೆ ಜೋಡಿಸಿದ್ದ ತಂತಿಯನ್ನು ಸ್ಪರ್ಶಿಸಿ, 9 ತಿಂಗಳು ತುಂಬಿರುವ ಗಬ್ಬದ ದನ ಹಾಗೂ ಎರಡು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಬಿರುಕು ಉಂಟಾಗಿ ಬೀಳುವ ಸ್ಥಿತಿಯಲ್ಲಿದ್ದ ಕಂಬವನ್ನು ಮಂಗಳವಾರ ಮೆಸ್ಕಾಂ ಇಲಾಖೆ ಬದಲಿಸಿ ಹೊಸದಾಗಿ ಕಂಬ ಅಳವಡಿಸಿ ಸ್ಟೇ ವಯರ್ ಎಳೆದಿದ್ದರು. ಆದರೆ ಗದ್ದೆಯನ್ನು ನೀರು ನಿಂತಿದ್ದ ಕಾರಣ ಮತ್ತು ರಾತ್ರಿಯಿಡೀ ಮಳೆಯ ಕಾರಣದಿಂದ ಹೊಸದಾಗಿ ಹಾಕಿದ ಸ್ಟೇ ವಯರ್ ನೆಲದ ಆಧಾರ ಕಳೆದು ಕೊಂಡಿತ್ತು . ಹೀಗಾಗಿ ತಂತಿಗಳು ಜೋತುಬಿದ್ದು ಗದ್ದೆಯ ನೀರಿಗೆ ತಾಗಿತ್ತು. ದನಗಳು ತಂತಿಯ ಹತ್ತಿರ ಬಂದ ಕೂಡಲೇ ವಿದ್ಯುತ್ ಶಾಕ್ಗೆ ಒಳಗಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೆಸ್ಕಾಂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕಂದಾಯ ಇಲಾಖೆಯವರು ಭೇಟಿ ನೀಡಿದ್ದು, ಸ್ಥಳೀಯ ಪಶು ವೈದ್ಯರು ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.