ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿಯನ್ನು ಸರ್ವಾರ್ಹ ಪ್ರಜೆಯನ್ನಾಗಿ ಪರಿವರ್ತಿಸುತ್ತದೆ: ಡಾ.ಲಕ್ಷ್ಮೀನಾರಾಯಣ ಕೆ.ಎಸ್.

ಶೇರ್ ಮಾಡಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಜು.8 ಶನಿವಾರ ದಂದು ಶ್ರೀ ಧ.ಮಂ.ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 2022-23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಿತು.

ಇದೇ ಸಂದರ್ಭದಲ್ಲಿ ಯೋಜನಾಧಿಕಾರಿಯಾಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ. ಲಕ್ಷ್ಮೀನಾರಾಯಣ್ ಕೆ.ಎಸ್ ರವರಿಗೆ ಬೀಳ್ಕೊಡುಗೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿ ನಾಯಕ ಯಕ್ಷಿತ್ ಘಟಕಗಳ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಸಭೆಯ ಮುಂದೆ ಮಂಡಿಸಿದರು. ಕಾಲೇಜಿನ ಎನ್ಎಸ್ಎಸ್ ಘಟಕಕ್ಕೆ ನಾಲ್ಕು ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ ಡಾ. ಲಕ್ಷ್ಮೀನಾರಾಯಣ, ಇವರಿಗೆ ಸ್ವಯಂಸೇವಕರ ಪರವಾಗಿ ಪ್ರಾಚಾರ್ಯರು ಸನ್ಮಾನ ಮಾಡಿ ಗೌರಾರ್ಪಣೆಯನ್ನು ನೆರವೇರಿಸಿದರು. ಅವರ ಕುರಿತು ಸ್ವಯಂಸೇವಕರೇ ತಯಾರಿಸಿದ್ದ ಒಂದು ಗೀತೆ ಹಾಗೂ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಲಕ್ಷ್ಮೀನಾರಾಯಣ ಕೆ.ಎಸ್ ರವರು ಯೋಜನಾಧಿಕಾರಿ ಸ್ಥಾನ ಅಧಿಕಾರವಲ್ಲ, ಬದಲಿಗೆ ಅದು ಜವಾಬ್ದಾರಿ. 2019-20 ಸಾಲಿನಲ್ಲಿ ನಾನು ಮೊದಲು ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡಾಗ, ಈ ಹಿಂದಿನ ಅತ್ಯುನ್ನತ ಪರಂಪರೆಯ, ಸಾಧಕ ಯೋಜನಾಧಿಕಾರಿಗಳ ಇತಿಹಾಸವನ್ನು ಹೊಂದಿದ್ದ ಘಟಕವನ್ನು ಮುನ್ನಡೆಸುವುದು ಸವಾಲಾಗಿತ್ತು. ಆದರೂ, ಚಾರ್ಮಾಡಿಯಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ, ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ ಜಾಗ್ರತಿ, ವ್ಯಾಕ್ಸಿನ್ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಲಸಿಕಾ ಕಾರ್ಯಕ್ರಮಗಳು, ಅರಣ್ಯೀಕರಣ, ಜಲ ಸಂರಕ್ಷಣೆ, ಆಜಾದಿ ಕಾ ಅಮ್ರತ್ ಮಹೋತ್ಸವ ಕಾರ್ಯಕ್ರಮಗಳು, ಸ್ವಯಂಸೇವಕರು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದು ಸಮಾಧಾನ ತಂದಿವೆ ಎಂದು ಹೇಳಿದರು. ಎನ್. ಎಸ್. ಎಸ್.ನ ಚಟುವಟಿಕೆಗಳು ಸ್ವಯಂಸೇವಕರಿಗೆ ಮಾತ್ರವಲ್ಲ, ನಮಗೂ ಬಹಳಷ್ಟು ಜೀವನ ಶಿಕ್ಷಣವನ್ನು ನೀಡುತ್ತದೆ, ನಮ್ಮನ್ನೂ ಒಬ್ಬ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದರು. ನನಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಲು ಎಸ್‌.ಡಿ.ಎಂ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರುಗಳು, ಹಿರಿಯ ಯೋಜನಾಧಿಕಾರಿಗಳು ನನಗೆ ಬಹಳಷ್ಟು ಮಾರ್ಗದರ್ಶನವನ್ನು ನೀಡಿದ್ದಾರೆ. ಅವರೆಲ್ಲರ ಬೆಂಬಲ, ಎಲ್ಲಾ ಸ್ವಯಂಸೇವಕರು ಮಾಡಿದ ನಿಸ್ವಾರ್ಥ ಸೇವೆಯೇ ನನಗೆ ಸ್ಪೂರ್ತಿ,‌ ನಮ್ಮ ಘಟಕಗಳ ಕಾರ್ಯ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನ,‌ ಯಶಸ್ಸಿನ ಹಿಂದಿನ ನೇರ ಕಾರಣ ಎಂದರು. ಇದೇ ಸಂದರ್ಭದಲ್ಲಿ, ನೂತನ ಯೋಜನಾಧಿಕಾರಿಯಾಗಿ ನಿಯುಕ್ತರಾದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮಹೇಶ್ ಕುಮಾರ್ ಶೆಟ್ಟಿ ರವರಿಗೆ, ಸ್ವಯಂಸೇವಕರು ಸ್ವತಃ ತಮ್ಮ ಕ್ರಿಯಾಶೀಲತೆಯಿಂದ ತಯಾರಿಸಿದ ಅಧಿಕಾರದ ದಂಡವನ್ನು ನೀಡುವುದರ ಮೂಲಕ ನಿರ್ಗಮಿತ ಯೋಜನಾಧಿಕಾರಿ ಅಧಿಕಾರವನ್ನು ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿಮಾತನಾಡಿದ ನೂತನ ಯೋಜನಾಧಿಕಾರಿಗಳು ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಎನ್ ಎಸ್ ಎಸ್ ಘಟಕಕ್ಕೆ ಅದರದ್ದೆ ಆದ ಒಂದು ಸ್ಥಾನವಿದೆ. ಎನ್.ಎಸ್.ಎಸ್ ಅಂದರೆ ಕ್ರಿಯಾಶೀಲತೆ ಮತ್ತು ಶಿಸ್ತು. ಹಿರಿಯ ಯೋಜನಾಧಿಕಾರಿಗಳಿಂದ ಪೋಷಿತಗೊಂಡ ಈ ಘಟಕದ ಜವಾಬ್ದಾರಿಯನ್ನು ಬಹಳ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ ಕುಮಾರ ಹೆಗ್ಡೆರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ‘ಸೇವಾ ಹೀ ಪರಮೋ ಧರ್ಮ’ ಎನ್ನುವ ಹಾಗೆ ಸೇವೆಯೇ ನಮ್ಮ ಧರ್ಮವಾಗಬೇಕು. ಸ್ವಯಂಸೇವಕರು ಹೆಚ್ಚಾಗಿ ತಮ್ಮನ್ನು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ, ಒಬ್ಬ ಉತ್ತಮ ನಾಯಕನಾಗಿ, ನಾಗರೀಕನಾಗಿ ಬೆಳೆಯಲು ಸಾಧ್ಯ ಎಂದರು. ಡಾ. ಲಕ್ಷ್ಮಿನಾರಾಯಣ ಒಬ್ಬ ಪ್ರತಿಭಾವಂತ, ಛಲಗಾರ, ಧೈರ್ಯ ಮತ್ತು ಸಾಹಸವುಳ್ಳವರು, ಅವರ ಸೇವಾವಧಿಯ ಕಾರ್ಯಕ್ರಮಗಳು ಪ್ರಶಂಸಾರ್ಹ ‌ಎಂದರು. ಅಲ್ಲದೇ, ತಾವು ಯೋಜನಾಧಿಕಾರಿಯಾಗಿದ್ದ ಸಂದರ್ಭದ ಘಟನೆಗಳನ್ನು ಮೆಲುಕು ಹಾಕಿದರು. ಈ ದಿನ ಅಧಿಕಾರ ಸ್ವೀಕಾರ ಮಾಡಿದ ಡಾ.ಮಹೇಶ್ ಶೆಟ್ಟಿರವರು ವಿದ್ಯಾರ್ಥಿ ಸ್ನೇಹಿಯಾಗಿದ್ದಾರೆ, ಕಾರ್ಯ ನಿರ್ವಹಣೆಯಲ್ಲಿ ಬಹಳ ಚಾಕಚಕ್ಯತೆ ಇರುವವರು. ಅವರಿಗೆ ಶುಭವಾಗಲಿ ಎಂದೂ ಹೇಳಿದರು.

ಪ್ರೊ. ದೀಪಾ ಆರ್.ಪಿ, ಯೋಜನಾಧಿಕಾರಿಗಳು, ಮಾತನಾಡಿ ಎನ್.ಎಸ್.ಎಸ್ ನ ಚಟುವಟಿಕೆಗಳು ನಿಂತ ನೀರಲ್ಲ. ಅದು ಮುಂದೆ ಹರಿಯುತ್ತಲೇ ಇರುತ್ತದೆ. ಅದನ್ನು ಮುನ್ನಡೆಸುವುದಷ್ಟೆ ನಮ್ಮ ಕೆಲಸ. ಡಾ.ಲಕ್ಷ್ಮೀನಾರಾಯಣರವರೊಂದಿಗೆ ಕೆಲಸ ಮಾಡಿದ ಅನುಭವ ಸದಾ ಸ್ಮರಣೀಯ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಎನ್.ಎಸ್.ಎಸ್ ನ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಸ್ವಯಂಸೇವಕಿ ಅಂಜನಾ.ಕೆ ರಾವ್ ನಿರೂಪಿಸಿದರು. ಸ್ವಯಂಸೇವಕಿ ರಿಯಾ ಲವಿಟಾ ಮೋನಿಸ್ ಸ್ವಾಗತಿಸಿ, ತ್ರಿಶೂಲ್ ವಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ಯೋಜನಾಧಿಕಾರಿಗಳಾದ ಪ್ರೊ.ಆಶಾಕಿರಣ್, ಹಿರಿಯ ಸ್ವಯಂಸೇವಕರು, ಕಿರಿಯ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

error: Content is protected !!