ನಟ ಕಿಚ್ಚ ಸುದೀಪ್ ಮೇಲೆ ನಿರ್ಮಾಪಕ ಎಂ.ಎನ್ ಕುಮಾರ್ ಮಾಡಿದ ಆರೋಪ ದಿನೇ ದಿನೇ ಹೊಸರೂಪ ಪಡೆಯುತ್ತಿದೆ. ಸುದೀಪ್ ಅವರ ಮೇಲೆ ಹೊರಿಸಿರುವ ಆರೋಪದ ಬಗ್ಗೆ ನಾವು ಕಾನೂನು ಹೋರಾಟ ಮಾಡುವುದಾಗಿ ನಿರ್ಮಾಪಕ ಜಾಕ್ ಮಂಜು ಅವರು ಹೇಳಿದ್ದರು.
ನಿನ್ನೆಯಷ್ಟೇ ಕಿಚ್ಚ ಸುದೀಪ್ ಅವರು ಕರ್ನಾಟಕ ವಾಣಿಜ್ಯ ಮಂಡಳಿಗೆ ಪತ್ರ ಸಹ ಬರೆದಿದ್ದರು. ಇದರ ಬೆನ್ನಲ್ಲೇ ಹುಚ್ಚ ಸಿನಿಮಾ ನಿರ್ಮಾಪಕ ರೆಹಮಾನ್ ಅವರು ಸುದೀಪ್ ಅವರಿಂದ ಹಣಕಾಸು ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಕುಮಾರ್ ಪರ ಧ್ವನಿ ಎತ್ತಿದ್ದರು.
ಇದೀಗ ಈ ವಿಚಾರಗಳು ಸುದೀಪ್ ಅಭಿಮಾನಿಗಳನ್ನು ಕೆರಳಿಸಿದೆ. ನಿರ್ಮಾಪಕರಾದ ಎಂ.ಎನ್ ಕುಮಾರ್, ರೆಹಮಾನ್, ಸುರೇಶ್ ಹಾಗೂ ಎ.ಗಣೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಇವರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ನಾವು ಮೌನವಾಗಿದ್ದು ನಿಜ, ಆದರೆ ಸುಮ್ಮನೆ ಕುಳಿತಿಲ್ಲ. ಆಧಾರ ರಹಿತ ಆರೋಪವನ್ನು ನಾವು ಸಹಿಸುವುದಿಲ್ಲ. ಇನ್ನೆರಡು ದಿನಗಳಲ್ಲಿ ಈ ನಿರ್ಮಾಪಕರುಗಳು ಸುದೀಪ್ ಅವರಲ್ಲಿ ಕ್ಷಮೆ ಕೇಳದೇ ಹೋದಲ್ಲಿ ನಾವು ಉಗ್ರ ಹೋರಾಟಕ್ಕೆ ಸಿದ್ಧ ಎಂದು ಕಿಚ್ಚ ಸುದೀಪ್ ಅಭಿಮಾನಿ ಸಂಘದ ಉಪಾಧ್ಯಕ್ಷ ನವೀನ್ ಹೇಳಿದ್ದಾರೆ. ನವೀನ್ ನೇತೃತ್ವದಲ್ಲಿ ಫಿಲ್ಮ್ ಚೇಂಬರ್ಗೆ ಪತ್ರದ ಮೂಲಕ ದೂರನ್ನು ನೀಡಲಾಗಿದೆ. ಇನ್ನು ಈ ವಿಚಾರವನ್ನು ಕಾನೂನು ಮೂಲಕ ಬಗೆಹರಿಸಿಕೊಳ್ಳಲು ಸುದೀಪ್ ಮುಂದಾಗಿದ್ದಾರೆ ಅನ್ನೋದು ಕಿಚ್ಚನ ಆಪ್ತರು ಹೇಳುವ ಮಾತು.
ಕಳೆದ 8-10 ದಿನಗಳಿಂದ ಕಿಚ್ಚ ಸುದೀಪಣ್ಣನವರ ವಿರುದ್ಧ ಕೆಲವು ನಿರ್ಮಾಪಕರು ಮಾಡುತ್ತಿರುವ ಅಪಪ್ರಚಾರ ಮತ್ತು ಅವರ ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿರುವುದನ್ನು ಅಭಿಮಾನಿಗಳಾದ ನಾವು ಗಮನಿಸುತ್ತಿದ್ದೇವೆ. ಆದ್ದರಿಂದ ನಮ್ಮ ಕಿಚ್ಚ ಸುದೀಪಣ್ಣನವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿರುವ ನಿರ್ಮಾಪಕರುಗಳಾದ ಎಂ.ಎನ್ ಕುಮಾರ್, ರೆಹಮಾನ್, ಎನ್.ಎಂ ಸುರೇಶ್, ಗಣೇಶ್ ಹಾಗೂ ಸುರೇಶ್ ಕೃಷ್ಣ ಇವರೆಲ್ಲರೂ ಕ್ಷಮೆ ಕೇಳಬೇಕು ಎಂದು ನಾವು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಆದ್ದರಿಂದ ಈ ನಿರ್ಮಾಪಕರುಗಳಿಗೆ ಬುದ್ಧಿ ಹೇಳಿ ಕ್ಷಮೆ ಕೇಳಿಸಬೇಕು. ಅಲ್ಲದೇ ಸಾಕ್ಷಿ ಆಧಾರಗಳಿಲ್ಲದೇ ಸುಳ್ಳು ಆರೋಪ ಮಾಡುವುದನ್ನು ತಡೆ ಹಿಡಿಯಬೇಕು ಎಂದು ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಲ್ಲಿ ಪ್ರಾರ್ಥಿಸುತ್ತೇವೆ. ಎಂದು ಸುದೀಪ್ ಅಭಿಮಾನಿ ಸಂಘದಿಂದ ನೀಡಿದ ದೂರಿನಲ್ಲಿ ಕೇಳಿಕೊಳ್ಳಲಾಗಿದೆ.
ರಸ್ತೆ ಸಂಚಾರ ತಡೆದು ನಿರ್ಮಾಪಕರ ವಿರುದ್ಧ ಆಕ್ರೋಶ:
ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಮಾಡಿರುವ ಆರೋಪಗಳು ಕಿಚ್ಚನ ಅಭಿಮಾನಿಗಳನ್ನು ಕೆರಳಿಸಿದ್ದು, ರಸ್ತೆ ಸಂಚಾರ ತಡೆದು ಆಕ್ರೋಶ ಹೊರಹಾಕಿದ್ದಾರೆ. ಚಾಮರಾಜನಗರದ ಚಾಮರಾಜೇಶ್ವರ ದೇಗುಲದಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದ ತನಕ ಮೆರವಣಿಗೆ ನಡೆಸಿದ ಅಭಿಮಾನಿಗಳು ರಸ್ತೆ ಸಂಚಾರ ತಡೆದು ನಿರ್ಮಾಪಕ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಸುದೀಪ್ ಅವರಲ್ಲಿ ಕ್ಷಮೆ ಕೇಳಬೇಕು. ತಮ್ಮ ಆರೋಪಗಳು ಸುಳ್ಳು ಎಂದು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೇ, ಕುಮಾರ್ ಅವರ ಯಾವುದೇ ಸಿನಿಮಾಗಳನ್ನು ಬಿಡುಗಡೆ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ರಸ್ತೆ ತಡೆ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸು ಜನದಟ್ಟಣೆ ಉಂಟಾಗಿತ್ತು.