ಜೈನ ಮುನಿ ಹತ್ಯೆ ಪ್ರಕರಣದ ತನಿಖೆ: ಟವೆಲ್‌ನಲ್ಲಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ!

ಶೇರ್ ಮಾಡಿ

ಚಿಕ್ಕೋಡಿ: ಜೈನಾಚಾರ್ಯ ಜಿನೈಕ್ಯ ಕಾಮಕುಮಾರ ನಂದಿ ಮಹಾರಾಜರನ್ನು ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತದ ಆಶ್ರಮದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪ್ರಕರಣದ ಎಫ್​ಐಆರ್​ (ಪ್ರಥಮ ಮಾಹಿತಿ ವರದಿ)ನಲ್ಲಿ ಉಲ್ಲೇಖಿಸಲಾಗಿದೆ.

ಕಾಮಕುಮಾರ ನಂದಿ ಮಹಾರಾಜರು ಜುಲೈ 6ರಂದು ಮಠದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಆಶ್ರಮದವರು ಪೊಲೀಸರಿಗೆ ದೂರು ನೀಡಿದ್ದರು. ಎರಡು ದಿನದ ಬಳಿಕ ಮೃತದೇಹ ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದ ಕೊಳವೆ ಬಾವಿಯಲ್ಲಿ ಪತ್ತೆಯಾಗಿತ್ತು. ಹಂತಕರು ಸ್ವಾಮೀಜಿಯ ದೇಹವನ್ನು ಹಲವು ಭಾಗಗಳಾಗಿ ತುಂಡರಿಸಿ ಕೊಳವೆ ಬಾವಿಗೆ ಎಸೆದಿದ್ದರು.

ಈ ಸಂಬಂಧ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಹಂತಕರ ಕ್ರೌರ್ಯ:
ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹಸನಸಾಬ ದಲಾಯತ್ ಜೊತೆಯಾಗಿಯೇ ಜೈನಮುನಿಯನ್ನು ವಿದ್ಯುತ್ ಶಾಕ್​ ನೀಡಿ ಕೊಲ್ಲಲು ಪ್ರಯತ್ನಪಟ್ಟಿದ್ದರು. ಆದರೆ ತಮ್ಮ ಯೋಜನೆ ವಿಫಲವಾಗುತ್ತಿದ್ದಂತೆ, ಟವೆಲ್​ನಿಂದ ಕುತ್ತಿಗೆ ಬಿಗಿದು ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಆ ಬಳಿಕ ಶವವನ್ನು ಗೋಣಿಚೀಲದಲ್ಲಿ ತುಂಬಿ ಬೈಕ್​ನಲ್ಲಿ ಸುಮಾರು 35 ಕಿಲೋಮೀಟರ್ ದೂರದ ಕಡಕಬಾವಿ ಗ್ರಾಮಕ್ಕೆ ಸಾಗಿಸಿ ಕೊಳವೆ ಬಾವಿಗೆ ಹಾಕಿದ್ದಾರೆ. ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಈ ರೀತಿ ಮಾಡಿದ್ದಾರೆ ಎಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​ಐಆರ್​ನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಚಿಕ್ಕೋಡಿ ಪೊಲೀಸ್​​ ವಶಕ್ಕೆ :
ಮುನಿಶ್ರೀ ಹತ್ಯೆ ಪ್ರಕರಣದ ಆರೋಪಿಗಳನ್ನು ಹಿಂಡಲಗಾ ಜೈಲಿನಿಂದ ವಶಕ್ಕೆ ಪಡೆದು ಚಿಕ್ಕೋಡಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಲು ಮುಂದಾಗಿದ್ದಾರೆ. ತನಿಖಾಧಿಕಾರಿ, ಚಿಕ್ಕೋಡಿ ಸಿಪಿಐ ಆರ್.ಆರ್. ಪಾಟೀಲ್ ತಂಡದಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರುವ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್‌ನನ್ನು ಚಿಕ್ಕೋಡಿಯಲ್ಲಿನ 07 ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದುಕೊಳ್ಳಲಿದ್ದಾರೆ.

Leave a Reply

error: Content is protected !!