ಫೇಸ್ಬುಕ್ನಿಂದ ಪರಿಚಯವಾದ ವ್ಯಕ್ತಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತಲುಪಿದ್ದ ಭಾರತೀಯ ವಿವಾಹಿತ ಮಹಿಳೆ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ವಿವಾಹವಾಗಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿರುವುದಾಗಿ “ಇಂಡಿಯಾ ಟುಡೇ” ವರದಿ ಹೇಳಿದೆ.
ಘಟನೆ ಹಿನ್ನೆಲೆ:
ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು ಫೇಸ್ ಬುಕ್ ನಲ್ಲಿ ಪರಿಚಯವಾಗಿರುವ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕ್ ಗೆ ತಲುಪಿದ್ದರು. ಆಕೆ ಪ್ರಯಾಣದ ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಪಾಕಿಸ್ತಾನಕ್ಕೆ ತಲುಪಿದ್ದಾಳೆ. ಅಂಜು ವಾಟ್ಸಾಪ್ ಮೂಲಕ ಕರೆ ಮಾಡಿ ನಾನು ಲಾಹೋರ್ ನಲ್ಲಿದ್ದೇನೆ. 3-4 ದಿನದಲ್ಲಿ ಬರುವುದಾಗಿ ಹೇಳಿದ್ದಳು ಎಂದು ಆಕೆಯ ಪತಿ ಅರವಿಂದ್ ಮಾಧ್ಯಮಕ್ಕೆ ತಿಳಿಸಿದ್ದರು.
ಇದಾದ ಬಳಿಕ ಅಂಜು ಶೀಘ್ರದಲ್ಲಿ ಭಾರತಕ್ಕೆ ಬರುತ್ತೇನೆ. ಇಲ್ಲಿ ಮದುವೆಯೊಂದರಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದು ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿತ್ತು.
ಆದರೆ ಇದೀಗ ಪಾಕ್ ಗೆ ತೆರಳಿದ್ದ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ “ಫಾತಿಮಾ” ಎಂದು ಬದಲಾಯಿಸಿಕೊಂಡು ನಸ್ರುಲ್ಲಾ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಅಪ್ಪರ್ ದಿರ್ನಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಇಬ್ಬರ ನಿಕಾಹ್ ಕುಟುಂಬದ ಸಮ್ಮುಖದಲ್ಲಿ ನಡೆದಿದೆ. ಮದುವೆಯ ಬಳಿಕ ನವ ಜೋಡಿಯುಅಂಜು ವೆಡ್ಸ್ ನಸ್ರುಲ್ಲಾ ಶೀರ್ಷಿಕೆಯ ವಿಡಿಯೋವನ್ನು ಮಾಡಿದೆ. ಈ ವಿಡಿಯೋ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಅಂಜು ಹಾಗೂ ನಸ್ರುಲ್ಲಾ ಪತಿ – ಪತ್ನಿಯರಾಗಿ ಪರ್ವತ ತಾಣಗಳಲ್ಲಿ ಸುತ್ತಾಡುವ ದೃಶ್ಯವಿದೆ.
ಕೋರ್ಟ್ ನಲ್ಲಿ ಮದುವೆಯಾದ ಬಳಿಕ ಪೊಲೀಸ್ ಭದ್ರತೆಯಲ್ಲಿ ಅಂಜು ಅವರನ್ನು ಗಂಡನ ಮನೆಗೆ ಕರೆದುಕೊಂಡು ಹೋಗಲಾಯಿತೆಂದು ವರದಿ ತಿಳಿಸಿದೆ.
ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20 ರ ರಂದು ನಾನು ಭಾರತಕ್ಕೆ ಬರುತ್ತೇನೆ. ನಸ್ರುಲ್ಲಾ ಅವರೊಂದಿಗೆ ವಿವಾಹವಾಗುವ ಯೋಜನೆ ಇಲ್ಲವೆಂದು ಮಾಧ್ಯಮಗಳಿಗೆ ಅಂಜು ಹೇಳಿದ್ದರು.
ನಸ್ರುಲ್ಲಾ ಅವರು ಕೂಡ ಅಂಜು ಜೊತೆ ವಿವಾಹವಾಗುವ ವಿಚಾರ ಸುಳ್ಳು. ನಾವು ಇಬ್ಬರು 2019 ರಿಂದ ಫೇಸ್ ಬುಕ್ ಸ್ನೇಹಿತರು ಅಷ್ಟೇ. ಅವರು ಶೀಘ್ರದಲ್ಲಿ ಅವರ ದೇಶಕ್ಕೆ ಹೋಗಲಿದ್ದಾರೆ. ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಅಂಜು ಅವರ ಮನೆಯ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಫೋನಿನ ಮೂಲಕ ಪಿಟಿಐಗೆ ಹೇಳಿದ್ದರು.