ಇಚ್ಲಂಪಾಡಿ: 11ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಶೇರ್ ಮಾಡಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇಚ್ಲಂಪಾಡಿ ಹಾಗೂ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ನೇರ್ಲ ಇಚ್ಲಂಪಾಡಿ ಇದರ ವತಿಯಿಂದ 11ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19ರಂದು ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.

ಅರ್ಚಕ ಹರೀಶ್ ಭಟ್ ಕೋಡಿಂಬಾಳರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಸೆ.18ರಂದು ಸಂಜೆ ಶ್ರೀ ಗಣಪತಿ ದೇವರ ತರಲಾಯಿತು ಬಳಿಕ ಗೌರಿ ಹಬ್ಬದ ಪ್ರಯುಕ್ತ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ನೇರ್ಲ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ, ಬಳಿಕ ಬಾಲುಸ್ ಪವರ್ ಝೋನ್ ಬಿಟ್ ವಾರಿರ‍್ಸ್ ಡ್ಯಾನ್ಸ್ ಕ್ರಿಪ್ ಉಪ್ಪಿನಂಗಡಿ ಇವರಿಂದ ನೃತ್ಯ ವೈಭವ ನಡೆಯಿತು.

ಸೆ.19ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಹೋಮ ನಡೆಯಿತು. ನಂತರ 7.32ರ ತುಲಾ ಲಗ್ನ ಸುಮೂರ್ತದಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ ಆಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸುರೇಶ ಬಿಜೇರು ಮತ್ತು ದಿನೇಶ ಬಿಜೇರು ಇವರ ಪ್ರಾಯೋಜಕತ್ವದಲ್ಲಿ ವಿಶೇಷ ಹುಲಿ ಕುಣಿತ ನಡೆಯಿತು.

ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ದೈವದ ಮಧ್ಯಸ್ಥ, ಯುವ ವಾಗ್ಮಿ ಮನ್ಮಥ ಶೆಟ್ಟಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅಭ್ಯಾಗತರಾಗಿದ್ದ ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶುಭಾಕರ ಹೆಗ್ಗಡೆಯವರು ಶುಭ ಹಾರೈಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಮನ್ ಆರ್.ಕೆ.ಕೆರ್ನಡ್ಕ ಅಧ್ಯಕ್ಷತೆ ವಹಿಸಿದ್ದರು. ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಇಚ್ಲಂಪಾಡಿ ಒಕ್ಕೂಟದ ಅಧ್ಯಕ್ಷ ಚೆನ್ನಪ್ಪ ಗೌಡ ಕುಡಾಲ ಸಂದರ್ಭೋಚಿತವಾಗಿ ಮಾತನಾಡಿದರು. ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ರುಕ್ಮಯ್ಯ ಗೌಡ ಕೊರಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಚ್ಲಂಪಾಡಿ-ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಗೌರವಾಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯತ್ತಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಶವ ಅಲೆಕ್ಕಿ ವಂದಿಸಿದರು. ರಾಧಾಕೃಷ್ಣ ಗೌಡ ಕೆರ್ನಡ್ಕ, ಉದಯಕುಮಾರ್ ಹೊಸಮನೆ ನಿರೂಪಿಸಿದರು.

ಮಾಜಿ ಸೈನಿಕರಾದ ಉಣ್ಣಿಕೃಷ್ಣನ್ ನಾಯರ್, ಚಿದಾನಂದ ಗೌಡ ಕೋಟಿಪಾಲು, ಹರಿಚಂದ್ರ ಪೂಜಾರಿ ಮುಚ್ಚಿಲ, ರತ್ನಾಕರ ಪೂಜಾರಿ ಮುಚ್ಚಿಲ ಹಾಗೂ ಸತೀಶ್‌ಬಾಬು ಮಾನಡ್ಕ ಅವರ ಪರವಾಗಿ ಅವರ ತಾಯಿಯನ್ನು ಸನ್ಮಾನಿಸಲಾಯಿತು. ನಿರಂತರ ವೈದಿಕ ಕಾರ್ಯಕ್ರಮ ನೆರವೇರಿಸುತ್ತಿರುವ ಹರೀಶ್ ಭಟ್ ಕೋಡಿಂಬಾಳ, ಸಿಡಿಮದ್ದು ಪ್ರಾಯೋಜಕರಾದ ತಿರುಮಲೇಶ್ವರ ಬಿಜೇರು, ಭಜನಾ ಮಂದಿರಕ್ಕೆ ಗೇಟು ದಾನಿ ಹರಿಶ್ಚಂದ್ರ ಒಡ್ಯೆತ್ತಡ್ಕ, ಹುಲಿಕುಣಿತದ ಪ್ರಾಯೋಜಕರಾದ ಸುರೇಶ್ ಬಿಜೇರು, ದಿನೇಶ ಬಿಜೇರು ಹಾಗೂ ಪ್ರತಿವಾರ ಭಜನೆಯಲ್ಲಿ ಪಾಲ್ಗೊಳ್ಳುತ್ತಿರುವ ಮಕ್ಕಳನ್ನು ಗುರುತಿಸಲಾಯಿತು.

ಸಂಜೆ ಶ್ರೀ ಮಹಾಗಣಪತಿ ದೇವರ ಭವ್ಯ ಶೋಭಾಯಾತ್ರೆಯೂ ನಡೆಯಿತು. ಭಜನಾ ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆಯು ಕಾಯರ್ತಡ್ಕಕ್ಕೆ ತೆರಳಿ ಅಲ್ಲಿಂದ ಇಚ್ಲಂಪಾಡಿಗೆ ಆಗಮಿಸಿ ಬೇರಿಕೆ ಕುರಿಯಾಳಕೊಪ್ಪದ ತನಕ ತೆರಳಿ ಅಲ್ಲಿಂದ ಹಿಂತಿರುಗಿ ಶಂಖದ್ವೀಪ ಎಂಬಲ್ಲಿ ಆಗಮಿಸಿ ಗುಂಡ್ಯ ಹೊಳೆಯಲ್ಲಿ ವಿಸರ್ಜನೆಗೊಂಡಿತು. ನಾಸಿಕ್‌ಬ್ಯಾಂಡ್, ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ನೀಡಿತು.

Leave a Reply

error: Content is protected !!