ಪಟ್ರಮೆ ಗ್ರಾಮದ ಅಭಿವೃದ್ದಿಯ ಹರಿಕಾರ ಎಂದೇ ಹೆಸರುಪಡೆದಿದ್ದ ದಿ.ಬೋಳೋಡಿ ವೆಂಕಟ್ರಮಣ ಭಟ್ ರವರ ಸ್ಮರಣಾರ್ಥ 8ನೇ ವರ್ಷದ ಯಕ್ಷಗಾನ ತಾಳಮದ್ದಳೆ ಕೂಟ ಸೆ. 20ರಂದು ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮರ್ಪಣಾ ಕಲಾ ಮಂದಿರದಲ್ಲಿ ಜರುಗಿತು.
ಗದಾಯುದ್ದ ಪೌರಾಣಿಕ ಕಥಾಪ್ರಸಂಗವನ್ನು ನಡೆಸಿಕೊಡಲಾಯಿತು. ಪ್ರಶಾಂತ ಪಂಜ ಮತ್ತು ಶಶಾಂಕ್ ಇವರ ಭಾಗವತಿಕೆ, ಸೀತಾರಾಮ ತೋಳ್ಪಡಿತ್ತಾಯ ಮತ್ತು ಜನಾರ್ಧನ ತೋಳ್ಪಡಿತ್ತಾಯರ ಮೃದಂಗ ಮತ್ತು ಚೆಂಡೆ, ಅರ್ಥಧಾರಿಗಳಾಗಿ ಪ್ರಸಿದ್ದ ಹಿರಿಯ ಯಕ್ಷಗಾನ ಕಲಾವಿದರುಗಳಾದ ಅಶೋಕ್ ಭಟ್ ಉಜಿರೆ, ಗಣರಾಜ್ ಕುಂಬ್ಳೆ, ಹಾಸ್ಯಗಾರನಾಗಿ ನಾರಾಯಣ ಉಜಿರೆ, ವಿಷ್ಣು ಶರ್ಮ, ಈಶ್ವರ ಪ್ರಸಾದ್ ನಿಡ್ಲೆ, ಗಂಗಾಧರ್ ಕಾಯರ್ತಡ್ಕ, ನಿರಂಜನ್ ಜೈನ್ ಭಾಗವಹಿಸಿದ್ದರು.
ಅನಾರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ದಿ.ವೆಂಕಟ್ರಮಣ ಭಟ್ಟರ ಮನೆಯವರು ಈ ತಾಳಮದ್ದಳೆ ಕೂಟವನ್ನು ಆಯೋಜಿಸಿದ್ದರು. ಪ್ರಾರಂಭದಲ್ಲಿ ಬಿ ಯಂ ಭಟ್ ಸ್ವಾಗತಿಸಿ, ಧನ್ಯವಾದವಿತ್ತರು. ಯಕ್ಷಗಾನ ಕಲಾವಿದರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.