ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿದೆ.
5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ನಟರಾಜ ಶರ್ಮಾ, ಗೋವಿಂದ ಪೂಜಾರಿ ಅವರು ನೀಡಿರುವ ದೂರಿನಲ್ಲಿ ನಗದು ರೂಪದಲ್ಲಿ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಟಿಕೆಟ್‌ಗೆ 5 ಕೋಟಿ ರೂ. ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ. ಮುಂಬೈನಲ್ಲಿ ವ್ಯವಹಾರ ಮಾಡಿಕೊಂಡಿದ್ದ ಅವರಿಗೆ 5 ಕೋಟಿ ರೂ. ಹಣವನ್ನು ನಗದು ರೂಪದಲ್ಲಿ ನೀಡಬಾರದು ಎನ್ನುವುದು ಅವರಿಗೆ ತಿಳಿದಿರಬೇಕಿತ್ತು. ಇದು ಹವಾಲಾ ಹಣ ಎಂಬ ದೃಷ್ಟಿಯಿಂದ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಈ ವಂಚನೆ ಪ್ರಕರಣದಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು. ಸಾಲವಾಗಿಯೇ ಹಣ ಪಡೆದಿದ್ದರೂ ಸಾಲ ಪಡೆದ ಉದ್ದೇಶವೇ ಬೇರೆಯಾಗಿದೆ. ನಗದು ರೂಪದಲ್ಲಿ ಇಷ್ಟೊಂದು ವ್ಯವಹಾರ ನಡೆಸಿದ್ದು ಹೇಗೆ? ಇಡಿ ಈ ವಿಚಾರವಾಗಿ ತನಿಖೆ ಮಾಡಬೇಕೆಂದು ಕೋರಿ ದೂರು ನೀಡಿದ್ದೇನೆ ಎಂದು ತಿಳಿಸಿದರು.