ಪ್ರಪಂಚದಲ್ಲಿ ಸೈಬರ್ ದರೋಡೆಕೋರರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಈ ಬಗ್ಗೆ ದಿನಕ್ಕೊಂದು ಪ್ರಕರಣ ದಾಖಲಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ಆನ್ಲೈನ್ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ಸಹಾಯ ಮಾಡುವ ನೆಪದಲ್ಲಿ ಸೈಬರ್ ವಂಚಕನೊಬ್ಬ ಮಹಿಳೆಗೆ 1.37 ಲಕ್ಷ ರೂ. ವಂಚಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಇದೇರೀತಿಯ ಅನೇಕ ಘಟನೆಗಳು ನಡೆಯುತ್ತಿದೆ. ಅನಾಮಿಕರ ಮಾತು ನಂಬಿ ಒಟಿಪಿ ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇದೆ.
ವಿದ್ಯುತ್ ಬಿಲ್, ಓಟಿಪಿ ಮೂಲಕ ಹಣ ದೋಚಿಕೊಳ್ಳುತ್ತಿರುವ ಖದೀಮರು ಈಗೀಗ ಫೋನ್‌ಗೆ ಮಿಸ್ಡ್‌ಕಾಲ್ ಕೊಡುವ ಮೂಲಕ ಸಿಮ್ ಸ್ವ್ಯಾಪ್ ಮಾಡಿ ಹಣ ಖದಿಯುವ ರಹಸ್ಯ ದಾರಿಯನ್ನೂ ಹುಡುಕಿದ್ದಾರೆ. ಸೈಬರ್ ಅಪರಾಧದಿಂದ ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ, ಗೃಹ ವ್ಯವಹಾರಗಳ ಸಚಿವಾಲಯವು ಎಸ್ಎಮ್ಎಸ್ ಮೂಲಕ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರಗಳನ್ನು ನಡೆಸುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತದೆ. ಆದರೆ ಇದರ ನಂತರವೂ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಹಾಗಾದರೆ ಆನ್‌ಲೈನ್ ವಂಚಕರಿಂದ ಹಣ ಕಳೆದುಕೊಂಡರೆ ಏನು ಮಾಡಬೇಕು?.
ಬೆಂಗಳೂರು ಪೊಲೀಸರು ಪರಿಚಯಿಸಿರುವ “ಗೋಲ್ಡನ್ ಅವರ್” ಎಂಬ ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು. ಈಗಾಗಲೇ ಈ ಗೋಲ್ಡನ್ ಅವರ್ ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ ಹಣವನ್ನು ಮರಳಿ ವಾಪಸು ಪಡೆದಿದ್ದಾರೆ. ಕೊರೊನ ಲಾಕ್‌ಡೌನ್ ಸಮಯದಲ್ಲಿ, ಆನ್‌ಲೈನ್ ವಂಚನೆಯಂತಹ ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿತ್ತು. ಈ ಕಾರಣಕ್ಕಾಗಿ ಗೋಲ್ಡನ್ ಅವರ್ ಸೌಲಭ್ಯ ತರಲಾಗಿತ್ತು.
ನೀವು ಹಣ ಕಳೆದುಕೊಂಡ ಒಂದು ಗಂಟೆಯ ಒಳಗೆ ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿದರೂ ಆಗುತ್ತದೆ. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವ ಪೂರ್ಣ ವಿವರ ನೀಡಬೇಕು. ಇಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಅವರು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ www.cybercrime.gov.in ಮೂಲಕವೂ ದೂರು ನೀಡಬಹುದು.
ಇನ್ನು ಆರ್‌ಬಿಐನ 114448 ಟೋಲ್ ಫ್ರಿ ಸಂಖ್ಯೆಗೆ ಕರೆ ಮಾಡಬಹುದು. https://cms.rbi.org.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು. ನೀವು ಯುಪಿಐ ಮೂಲಕ ಅಂದರೆ ಗೂಗಲ್ ಪೇ, ಫೋನ್ ಪೇ ಈ ರೀತಿಯ ತಾಣದಿಂದ ಹಣ ಕಳೆದುಕೊಂಡರೆ ಆ ಸಂಸ್ಥೆಗೆ ದೂರು ನೀಡಿ, ಇಲ್ಲವಾದಲ್ಲಿ ಕರೆ ಮಾಡಿ ವಿಷಯ ತಿಳಿಸಿ. ಈ ಸಂದರ್ಭ ಅವರು ಕೇಳಿದ ಎಲ್ಲಾ ದಾಖಲೆಗಳು, ಸ್ಕ್ರೀನ್ಶಾಟ್ಗಳನ್ನು ಅವರಿಗೆ ಕಳುಹಿಸಿ. ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಕಳೆದುಕೊಂಡರೆ ಆ ಕಂಪನಿಯನ್ನು ಕೂಡಲೇ ಸಂಪರ್ಕಿಸಿ ಮಾಹಿತಿ ನೀಡಿದರೆ ಎಲ್ಲ ಪ್ರೊಸೀಜರ್ ಮುಗಿದ ಬಳಿಕ ನಿಮಗೆ ನಿಮ್ಮ ಹಣ ಪುನಃ ಸಿಗುತ್ತದೆ.