ನಾಲ್ವರು ಅಲೆಮಾರಿ ಮಹಿಳೆಯರ ತಂಡವೊಂದು ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಕೊಂಡು ಪರಾರಿಯಾದ ಘಟನೆ ಶನಿವಾರ ಸಂಜೆ ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಗಾಂಧೀಕಟ್ಟೆ ಬಳಿಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ ನಂದರಬೆಟ್ಟು ನಿವಾಸಿ ಸುಂದರಿ ಎಂಬವರು ಚಿನ್ನದ ಸರ ಕಳಕೊಂಡ ಮಹಿಳೆ. ಸುಂದರಿ ಅವರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಾಣಿಜ್ಯ ಸಂಕೀರ್ಣದಲ್ಲಿ ಗಾಂಧೀಕಟ್ಟೆ ಪಕ್ಕದಲ್ಲಿರುವ ಬೇಕರಿಯೊಂದರಿಂದ ತಿಂಡಿಗಳನ್ನು ಖರೀದಿಸಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ನಾಲ್ವರು ಅಲೆಮಾರಿ ಮಹಿಳೆಯರ ತಂಡ ಏಕಾಏಕಿ ಅವರನ್ನು ಸುತ್ತುವರಿದು, ಅವರ ಕುತ್ತಿಗೆಯಲ್ಲಿದ್ದ ಸುಮಾರು ಮೂವರು ಪವನ್ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.
ತನ್ನ ಸರವನ್ನು ಕಳಕೊಂಡ ಸುಂದರಿ ಅವರು ಈ ವಿಚಾರವನ್ನು ನಗರದ ಜಂಕ್ಷನ್‍ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸೊಬ್ಬರಿಗೆ ತಿಳಿಸಿದ್ದು, ಬಳಿಕ ಪುತ್ತೂರು ನಗರ ಠಾಣೆಗೆ ತೆರಳಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.