ಅನೇಕ ಜನರು ರಾತ್ರಿ ಮಲಗುವ ಮೊದಲು ಒಂದು ಲೋಟ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ನೀವು ಕೂಡ ಆ ಪೈಕಿ ಒಬ್ಬರೇ? ಹೌದು ಎಂದಾದರೆ, ನೀವು ಮಲಗುವ ಮುನ್ನ ನೀರು ಕುಡಿಯುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕೆಲವರು ರಾತ್ರಿ ಮಲಗುವಾಗ ನೀರು ಕುಡಿದರೆ ರಾತ್ರಿ ಮೂತ್ರ ವಿಸರ್ಜನೆಗೆ ಪದೇಪದೆ ಏಳಬೇಕಾಗುತ್ತದೆ, ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನೀರು ಸೇವಿಸುವುದಿಲ್ಲ. ಆದರೆ, ಮಲಗುವಾಗ ನೀರು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ನೀವು ರಾತ್ರಿಯಲ್ಲಿ ಮಲಗುವ ಮೊದಲು ನಿಮ್ಮ ದೇಹವನ್ನು ಸಂಪೂರ್ಣವಾಗಿ ಹೈಡ್ರೇಟ್ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ, ನೀವು 6 ರಿಂದ 8 ಗಂಟೆಗಳ ಕಾಲ ನಿದ್ರಿಸುತ್ತೀರಿ. ಮಧ್ಯದಲ್ಲಿ ಒಂದು ಲೋಟ ನೀರನ್ನು ಕುಡಿಯಲು ಕೂಡ ನಿಮಗೆ ಎಚ್ಚರವಾಗುವುದಿಲ್ಲ. ಆದ್ದರಿಂದ, ರಾತ್ರಿಯಿಂದ ಬೆಳಗಿನವರೆಗೂ ನಿಮ್ಮ ದೇಹ ಹೈಡ್ರೀಕರಿಸಲ್ಪಡುವುದಿಲ್ಲ. ಹೀಗಾಗಿ, ರಾತ್ರಿ ಮಲಗುವ ಮುನ್ನ ನೀರು ಕುಡಿದರೆ ನಿಮ್ಮ ದೇಹ ರಾತ್ರಿ ವೇಳೆ ಹೈಡ್ರೇಟ್ ಆಗಿರುತ್ತದೆ.
ನೀವು ಮಲಗಿದಾಗ ನಿಮ್ಮ ದೇಹವು ದ್ರವದ ಅಂಶವನ್ನು ಕಳೆದುಕೊಳ್ಳುತ್ತದೆ. ನಿಮ್ಮ ನಿದ್ರೆಯಲ್ಲಿ ಕ್ಯಾಲೊರಿ ಬರ್ನ್ ಆಗುತ್ತಿರುತ್ತದೆ. ಅದಕ್ಕೆ ದೇಹ ನೀರನ್ನು ಬಳಸಿಕೊಳ್ಳುತ್ತದೆ. ನೀವು ನಿದ್ರಿಸುವಾಗ ಉಸಿರಾಡುತ್ತೀರಿ ಮತ್ತು ಬೆವರುತ್ತೀರಿ. ಇವೆರಡೂ ನಿಮ್ಮ ದೇಹದ ನೀರಿನ ಸಂಗ್ರಹವನ್ನು ಕಡಿಮೆ ಮಾಡುತ್ತವೆ. ನಿಮಗೆ ಜ್ವರ ಬಂದಿದ್ದರೆ ಅಥವಾ ಮಧುಮೇಹ ಇದ್ದರೆ ನಿಮ್ಮ ದೇಹವು ರಾತ್ರಿಯಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚು ನೀರನ್ನು ಕಳೆದುಕೊಳ್ಳುತ್ತದೆ.
ಅದಕ್ಕಾಗಿಯೇ ನೀವು ನಿದ್ದೆ ಮಾಡುವಾಗ ನಿರ್ಜಲೀಕರಣಗೊಳ್ಳುವ ಅಪಾಯವಿದೆ. ಅದನ್ನು ತಡೆಯಲು ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಮಲಗುವ ಮುನ್ನ ನೀರು ಕುಡಿಯುವುದರಿಂದ ಇತರ ಪ್ರಯೋಜನಗಳೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
- ರಾತ್ರಿ ಕುಡಿಯುವ ನೀರು ನಿಮ್ಮನ್ನು ಸಂತೋಷವಾಗಿರಿಸುತ್ತದೆ. ಮಲಗುವ ಮುನ್ನ ನೀರು ಕುಡಿಯದ ಜನರಿಗಿಂತ ರಾತ್ರಿಯಲ್ಲಿ ಚೆನ್ನಾಗಿ ನೀರು ಕುಡಿದು ದೇಹವನ್ನು ಹೈಡ್ರೀಕರಿಸಿದ ಜನರು ಬೆಳಿಗ್ಗೆ ಹೆಚ್ಚು ಶಾಂತ ಮತ್ತು ಖುಷಿಯಿಂದ ಇರುತ್ತಾರೆ ಎಂದು ಪ್ರಯೋಗಗಳು ತೋರಿಸಿವೆ.
- ನಿಮ್ಮ ದೇಹವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ರಕ್ತ ಪರಿಚಲನೆ ಸುಧಾರಿಸುತ್ತದೆ. ಅಂದರೆ, ನಿಮ್ಮ ದೇಹವು ಸೆಲ್ಯುಲಾರ್ ಮಟ್ಟದಲ್ಲಿ ಶುದ್ಧೀಕರಣವನ್ನು ನಿರ್ವಹಿಸುತ್ತದೆ. ಇದು ಜೀವಕೋಶಗಳಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ ಮತ್ತು ಒಳಗಿನಿಂದ ದೇಹವನ್ನು ರಿಫ್ರೆಶ್ ಮಾಡಲು ಜೀವಕೋಶಗಳಿಂದ ವಿಷವನ್ನು ತೆಗೆದುಹಾಕುತ್ತದೆ.
- ಮಲಗುವ ಮುನ್ನ ನೀರು ಕುಡಿಯುವುದು ಹೊಟ್ಟೆ ಸೆಳೆತ ಅಥವಾ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ನೀರಿಗೆ ಸ್ವಲ್ಪ ನಿಂಬೆಹಣ್ಣನ್ನು ಸೇರಿಸಿ ಕುಡಿದರೆ ನಿಮ್ಮ ಕೆಮ್ಮು ಮತ್ತು ಶೀತವನ್ನು ಗುಣಪಡಿಸುತ್ತದೆ.
- ದೇಹದ ಉಷ್ಣತೆಯ ನಿಯಂತ್ರಣವಾಗುತ್ತದೆ. ಮಲಗುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆಯನ್ನು ಚೆನ್ನಾಗಿ ನಿಯಂತ್ರಿಸಬಹುದು. ಇದು ನಿಮ್ಮ ನಿದ್ರೆಯು ತೊಂದರೆಯಾಗದಂತೆ ಮತ್ತು ಆರಾಮದಾಯಕವಾಗಿ ಉಳಿಯಲು ಸಹಾಯ ಮಾಡುತ್ತದೆ.
- ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ನಿರ್ಜಲೀಕರಣವು ನಿಮ್ಮ ಚರ್ಮವು ಅದರ ಎಲ್ಲಾ ಜಲಸಂಚಯನ ಮತ್ತು ನೈಸರ್ಗಿಕ ತೈಲಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ನಿಮ್ಮ ಮುಖದ ಮೇಲೆ ಕಲೆಗಳು, ಸುಕ್ಕುಗಳು ಮತ್ತು ಮೊಡವೆಗಳು ಉಂಟಾಗುವುದನ್ನು ತಡೆಯುತ್ತದೆ. ಮಲಗುವ ಮುನ್ನ ನೀರನ್ನು ಕುಡಿಯುವುದರಿಂದ ಚರ್ಮವನ್ನು ಮೃದುವಾಗಿಸುತ್ತದೆ.
ನೀವು ಮಲಗುವ ಮೊದಲು ನೀರು ಕುಡಿಯುವುದು ಉತ್ತಮ. ಆದರೆ, ಮಲಗುವಾಗಲೇ ನೀರು ಕುಡಿಯಬೇಡಿ. ಅದರ ಬದಲಿಗೆ, ನೀವು ಮಲಗುವ ಕನಿಷ್ಠ 2 ಗಂಟೆಗಳ ಮೊದಲು ನೀವು ನೀರನ್ನು ಕುಡಿಯಬೇಕು. ಏಕೆಂದರೆ ಮಲಗುವ ಮುನ್ನ ನೀರು ಕುಡಿಯುವುದರಿಂದ ನೋಕ್ಟುರಿಯಾದ ಅಪಾಯವಿದೆ. ನೋಕ್ಟುರಿಯಾ ಒಂದು ಅಸ್ವಸ್ಥತೆಯಾಗಿದ್ದು, ರಾತ್ರಿಯಲ್ಲಿ ಮೂತ್ರ ವಿಸರ್ಜಿಸುವ ಪ್ರಚೋದನೆ ಹೆಚ್ಚಾಗುತ್ತದೆ.