ಕಡಬದ ಯುವಕನೊಬ್ಬ ಕಣ್ಣೂರಿನಲ್ಲಿ ಬೆಳ್ಳಂಬೆಳಗ್ಗೆ ರೈಲಿನಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಆ.20ರಂದು ನಡೆದಿದೆ.
ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಸುರೇಶ(34) ಮೃತಪಟ್ಟ ಯುವಕ.
ಕೇರಳದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದ ಇವರು ಚೌತಿ ಹಬ್ಬದ ಹಿನ್ನೆಲೆ ವಾರದ ಹಿಂದೆಯಷ್ಟೇ ಮನೆಗೆ ಬಂದು ಮತ್ತೆ ಕೆಲಸಕ್ಕೆಂದು ಹೋಗಿದ್ದರು. ಗುರುವಾರ ರಾತ್ರಿ ಕರೆ ಮಾಡಿ ರೈಲಿನಲ್ಲಿ ಊರಿಗೆ ಬರುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಅವರ ಮೊಬೈಲ್ ನಂಬರ್ ಗೆ ಮನೆಯಿಂದ ಕರೆ ಮಾಡಿದ ವೇಳೆ ಆಸ್ಪತ್ರೆಯೊಂದರ ಸಿಬ್ಬಂದಿ ಪೋನ್ ಕರೆ ಸ್ವೀಕರಿಸಿ ಈ ವಿಚಾರ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಭೀಮ್ ಆರ್ಮಿ ಸಂಘಟನೆಯ ಸಹಕಾರದೊಂದಿಗೆ ಮನೆ ಮಂದಿ ಕಣ್ಣೂರಿಗೆ ಹೋಗಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹೆಚ್ಚಿನ ವಿವರ ಲಭಿಸಿಲ್ಲ.