ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್ ಫೇಕ್ ಮೂಲಕ ಯಾರದೋ ನಗ್ನ ದೇಹಕ್ಕೆ ಯುವತಿಯ ಭಾವಚಿತ್ರ ಅಳವಡಿಸಿ ಯುವಕ ಬ್ಯ್ಲಾಕ್ಮೇಲ್ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಫೋಟೋ ಎಡಿಟ್ ಮಾಡಿ ಬ್ಯ್ಲಾಕ್ಮೇಲ್ ಮಾಡಿದ್ದ ಆರೋಪಿ ಮಂಥನ್ ಪಾಟೀಲ್ (22)ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಯುವತಿ ಮತ್ತು ಆರೋಪಿ ಮಂಥನ್ ಪಾಟೀಲ್ ಒಂದೇ ಊರವನರಾಗಿದ್ದಾರೆ. ಮಂಥನ್ ಪಾಟೀಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಮಂಥನ್ ಪಾಟೀಲ್ ಯುವತಿಗೆ ಪ್ರೀತಿ ಮಾಡುವಂತೆ ಬೆನ್ನು ಬಿದ್ದಿದ್ದನು.
ಆದರೆ ಯುವತಿ ಈತನ ಲವ್ ಪ್ರಪೋಸಲ್ಗೆ ಒಪ್ಪಿರಲಿಲ್ಲ. ಹೀಗಾಗಿ ಆರೋಪಿ ಮಂಥನ್ ಪಾಟೀಲ್, ಸಾಮಾಜಿಕ ಜಾಲತಾಣದಿಂದ ಯುವತಿಯ ಫೋಟೋ ತೆಗೆದುಕೊಂಡು ನಗ್ನವಾಗಿ ಎಡಿಟ್ ಮಾಡಿ ವೈರಲ್ ಮಾಡುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಆದರೂ ಯುವತಿ ಪ್ರೀತಿ ಮಾಡಲು ಒಪ್ಪಿರುವುದಿಲ್ಲ. ಯುವತಿಯ ಮೇಲೆ ಮತ್ತಷ್ಟು ಒತ್ತಡ ಹಾಕಲು ಆರೋಪಿ ಮಂಥನ್ ಪಾಟೀಲ್ ಯುವತಿ ಮತ್ತು ಆಕೆಯ ಗೆಳತಿಯರು ಒಟ್ಟಿಗೆ ಇರುವ ಭಾವಚಿತ್ರ ತೆಗೆದುಕೊಂಡು ಯಾರದ್ದೋ ನಗ್ನ ಭಾವಚಿತ್ರಕ್ಕೆ ಇವರ ಮುಖವನ್ನು ಅಳವಡಿಸುತ್ತಾನೆ.
ನಂತರ ಅಂತಾ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಎಡಿಟ್ ಮಾಡಿದ್ದ ಯುವತಿಯರ ಭಾವಚಿತ್ರವನ್ನು ಅಪ್ಲೋಡ್ ಮಾಡುತ್ತಾನೆ. ಕೂಡಲೆ ಯುವತಿಯರು ಖಾನಾಪುರ ಪೊಲೀಸರಿಗೆ ದೂರು ನೀಡುತ್ತಾರೆ. ಅಲ್ಲದೆ ಯುವತಿಯರು ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆ ಎದುರು ಧರಣಿ ಕೂಡ ನಡೆಸಿದ್ದರು. ದೂರಿನನ್ವಯ ಖಾನಾಪುರ ಪೊಲೀಸರು ಆರೋಪಿ ಮಂಥನ್ ಪಾಟೀಲ್ನನ್ನು ಬಂಧಿಸಿದ್ದಾರೆ.