ಮಂಗಳೂರು: ನಗರದ ಕದ್ರಿ ಕೈಬಟ್ಟಲ್ ಪ್ರದೇಶದಲ್ಲಿ ರವಿವಾರ ರಾತ್ರಿ ಕಾಡುಕೋಣ ಕಾಣಿಸಿಕೊಂಡಿದೆ. ಸ್ಥಳೀಯ ಮನೆಯೊಂದರ ಮುಂಭಾಗದಿಂದ ಹಾದು ಹೋಗಿರುವ ದೃಶ್ಯಗಳು ಮನೆಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಬಳಿಕ ಶಿವಬಾಗ್ ಭಾಗದಲ್ಲಿ ಪತ್ತೆಯಾಗಿರುವ ಬಗ್ಗೆ ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಕೋಣದ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿದ್ದಾರೆ. ಆದರೆ ಹಗಲಿನಲ್ಲಿ ಕೋಣ ಪತ್ತೆಯಾಗಿಲ್ಲ. ಕೋಣ ಪಂಪ್ವೆಲ್ ಕಡೆಗೆ ಹೋಗಿರುವ ಸಾಧ್ಯತೆಯಿದ್ದು, ಮರೋಳಿ ಮೂಲಕ ಅರಣ್ಯಕ್ಕೆ ಹೋಗಿರಬಹುದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಶೋಧ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿರುವ ಅಧಿಕಾರಿಗಳು, ಕಾಡುಕೋಣ ತಾನಾಗಿಯೇ ಸ್ವಸ್ಥಾನಕ್ಕೆ ಸೇರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಭೀತಿಗೆ ಒಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.