ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜು : ವಿಶ್ವ ಏಡ್ಸ್ ದಿನಾಚರಣೆ ಎಚ್ ಐ ವಿ ಕುರಿತು ಜಾಗೃತಿ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಇಂದು ಯುವ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಎಚ್ ಐ ವಿ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಭಾಗವಾಗಿ “ಮಹೇಶ್ ಫೌಂಡೇಶನ್” ಎಂಬ ಸಂಸ್ಥೆಯ ಮೂಲಕ ಎಚ್ ಐ ವಿ ಸೋಂಕಿತ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಬೆಳಗಾವಿಯ ರಾಷ್ಟ ಪ್ರಶಸ್ತಿ ಪುರಷ್ಕೃತ ಮಹೇಶ್ ಜಾಧವ್ ಅವರ ಅನುಭವ ಕಥನವನ್ನು ವೀಕ್ಷಿಸಿ ಚರ್ಚಿಸಲಾಯಿತು. ಅವರು ಹೇಳುವಂತೆ ಇಂದಿನ ಸಮಾಜದಲ್ಲಿ ಆರೋಗ್ಯದ ಬಗ್ಗೆ ತುಂಬಾ ಕಾಳಜಿಯಿಂದ ಇರುವುದಷ್ಟೇ ಅಲ್ಲದೆ ಯುವ ಸಮುದಾಯವು ಎಚ್ ಐ ವಿ ಹರಡುವ ವಿಧಾನಗಳ ಕುರಿತು ಅರಿವನ್ನು ಹೊಂದುವುದು ತುಂಬಾ ಮುಖ್ಯವಾಗಿದೆ. ಎಚ್ ಐ ವಿ ಹರಡದಂತೆ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಕುರಿತು ಚರ್ಚಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಸಂಯೋಜಕರಾದ ಡಾ.ಸೀತಾರಾಮ ಪಿ ಅವರು ಮಾತನಾಡುತ್ತ ಎಚ್ ಐ ವಿ ಬಗ್ಗೆ ಈ ಮುಂಚೆ ಇದ್ದ ಭಯ ಆತಂಕಗಳಿಗಿಂತಲೂ ಆ ಕಾಯಿಲೆಯ ಬಗ್ಗೆ ಜಾಗೃತಿ ಹೊಂದುವುದು ತುಂಬಾ ಮಹತ್ವದ್ದು. ಮಹೇಶ್ ಜಾಧವ್ ಅವರಂತ ಸಾಮಾಜಿಕ ಸೇವೆ, ಮದುವೆಗೂ ಮುಂಚೆ ರಕ್ತ ಪರೀಕ್ಷೆ ಕಡ್ಡಾಯವಾಗಿ ಕಾನೂನು ಮಾಡಬೇಕೆಂಬ ಕ್ರಮಗಳು, ಎಚ್ ಐ ವಿ ನಿರ್ಮೂಲನೆ ಕುರಿತು ಅವರು ಪ್ರತಿಪಾದಿಸುವ ನಿಲುವುಗಳ ಮೂಲಕ ಏಡ್ಸ್ ನಿರ್ಮೂಲನೆ ಕುರಿತು ಸಮಾಜದಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಈ ಜಾಗೃತಿಯ ಭಾಗವಾಗಿ ಎಚ್ ಐ ವಿ ಸೋಂಕಿತ ಮಕ್ಕಳ ಆರೈಕೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಬೆಳಗಾವಿಯ ಮಹೇಶ ಫೌಂಡೇಶನ್ ಸಂಸ್ಥಾಪಕರಾದ ಮಹೇಶ್ ಜಾಧವ್ ಅವರ ಅನುಭವ ಕಥನವನ್ನು ವೀಕ್ಷಿಸುವ ಮೂಲಕ ಎಲ್ಲರಲ್ಲಿಯೂ ಅರಿವು ಹೆಚ್ಚಾಗಿ ಏಡ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.

ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ನೂರಂದಪ್ಪ ಅವರು ವಿಶ್ವ ಏಡ್ಸ್ ದಿನಾಚರಣೆ ಕುರಿತು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಯಾಗಿರುವ ಶ್ರೀಮತಿ ಶ್ರುತಿ ಹಾಗೂ ಶ್ರೀಮತಿ ಚಂದ್ರಕಲಾ ಬಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂಸೇವಕರು, ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

error: Content is protected !!