ಉದ್ಯಮಿ ಗೋವಿಂದಬಾಬು ಪೂಜಾರಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ ಎರಡನೇ ಆರೋಪಿ ಶ್ರೀಕಾಂತ್ಗೆ ಮೂರನೇ ಎಸಿಎಂಎಂ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅದರಂತೆ ಆರೋಪಿಗಳು ನಾಳೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಉದ್ಯಮಿ ಗೋವಿಂದ ಬಾಬು ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ಸೆಪ್ಟೆಂಬರ್ 13 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಒಟ್ಟು 4 ಕೋಟಿ ರೂ. ಹಣ ಪಡೆದಿದ್ದಳು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಮತ್ತು ಗ್ಯಾಂಗ್ ಹಣ ನೀಡದೇ ವಂಚಿಸಿತ್ತು. ಈ ಬಗ್ಗೆ ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದರು.