ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುಹೂರ್ತ ಸನ್ನಿಹಿತವಾಗಿರುವಂತೆಯೇ ರಾಜ್ಯದ ಕರಸೇವಕರ ಮೇಲಿನ ದುರುದ್ದೇಶಪೂರಿತ ಪ್ರಕರಣಗಳನ್ನು ಮತ್ತೆ ಮುನ್ನಲೆಗೆ ತಂದು ಕಾಂಗ್ರೆಸ್ ಸರ್ಕಾರ ತನ್ನ ಹಿಂದೂ ವಿರೋಧಿ ನೀತಿಯನ್ನು ಹಾಗೂ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನು ಮುಂದುವರಿಸಿದೆ ಎಂದು ಶಾಸಕ ವೇದವ್ಯಾಸ್ ಅವರು ಆಕ್ರೋಶ ವ್ಯಕ್ತಪಡಿಸಿದರು.
“ಕೋರ್ಟ್ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ, ಇದರಲ್ಲಿ ಸರ್ಕಾರದ ಯಾವುದೇ ಒತ್ತಡ ಇಲ್ಲ” ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದರೆ, ಸ್ವತಃ ಗೃಹ ಸಚಿವರೇ “ಹಳೆಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸೂಚನೆ ನೀಡಿದ್ದೆ, ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಇಲ್ಲಿ ಯಾರ ಮಾತು ನಿಜ? ಏನೇ ಇದ್ದರೂ ಕಾಂಗ್ರೆಸ್ ಸರ್ಕಾರ ಈ ಮೂಲಕ ಹಿಂದೂ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದಂತೂ ಸ್ಪಷ್ಟ. ಅದರಲ್ಲಿ ಯಾವುದೇ ಸಂಶಯವೂ ಇಲ್ಲ. ರಾಮಭಕ್ತರ ಮೇಲೆ ಇಷ್ಟೊಂದು ಹಗೆ ಸಾಧಿಸುವ ಕಾಂಗ್ರೆಸ್ಸಿನವರು ರಾಮಭಕ್ತರ ಮತವೇ ನಮಗೆ ಬೇಡ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಇಡೀ ದೇಶದ ಜನತೆ ರಾಮ ಮಂದಿರದ ಸಂಭ್ರಮದಲ್ಲಿರುವಾಗ ನಮ್ಮ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ರಾಮಭಕ್ತರ ಮೇಲೆ ಆಕ್ರೋಶದಲ್ಲಿದೆ. ಹಾಗಾಗಿಯೇ ಕರಸೇವಕರು ಹಾಗೂ ಹಿಂದೂಪರ ಕಾರ್ಯಕರ್ತರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲು ಮುಂದಾಗಿದೆ.
31 ವರ್ಷಗಳ ಹಿಂದಿನ ಪ್ರಕರಣಗಳಿಗೆ ಮರುಜೀವ ನೀಡಿ ಹಿಂದೂ ಕಾರ್ಯಕರ್ತರನ್ನು ಬೆದರಿಸುವ ತಂತ್ರ ಇದಾಗಿದ್ದು ಈಗಾಗಲೇ ಜಿಲ್ಲೆಯಲ್ಲೂ ಹಲವು ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡಲಾಗಿದ್ದು ಇನ್ನಷ್ಟು ಹೋರಾಟಗಾರರನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಿರುವುದು ಕಾಂಗ್ರೆಸ್ ಹಿಂದೂಗಳನ್ನು ಧಮನಿಸುವ ನೀತಿಗೆ ಸಾಕ್ಷಿ. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.