ಕೊಕ್ಕಡ: ಅಯೋಧ್ಯೆಯ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಜ.22ರಂದು ಬೆಳಗ್ಗೆ ಅಗ್ನಿಹೋತ್ರ, ಸರಸ್ವತಿ ವಂದನೆ, ಬಳಿಕ ಶಾಲಾ ಮೈದಾನದಲ್ಲಿ ಮಕ್ಕಳು ನೃತ್ಯ ಭಜನೆ ಮಾಡುವುದರ ಮೂಲಕ ಸಂಭ್ರಮಿಸಿದರು.
ವೇದವ್ಯಾಸ ಧ್ಯಾನ ಮಂದಿರದಲ್ಲಿ 108 ಬಾರಿ ರಾಮ ತಾರಕ ಮಂತ್ರ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸ್ ಪಠಿಸಿದರು. ಅಯೋಧ್ಯೆಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರವನ್ನು ವಿದ್ಯಾರ್ಥಿಗಳಿಗೆ ಪರದೆಯ ಮೂಲಕ ವೀಕ್ಷಿಸಲು ವ್ಯವಸ್ಥೆಗೊಳಿಸಲಾಗಿತ್ತು.
ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಕೇಸರಿ ಶಾಲಿನೊಂದಿಗೆ ಶಾಲೆಗೆ ಆಗಮಿಸಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಸಾಂಪ್ರದಾಯಿಕ ಸಿಹಿ ಭೋಜನದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.