ಕೊಕ್ಕಡ: ಪೈಪ್ ಲೈನ್ ಕೊರೆದು 9 ಲಕ್ಷ ರೂ ಮೌಲ್ಯದ ಡಿಸೇಲ್ ಕಳ್ಳತನ ಮಾಡಿದ ಘಟನೆ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ದಿನೇಶ್ ಗೌಡ(40), ಪುದುವೆಟ್ಟು ಗ್ರಾಮದ ಮೋಹನ್ (28), ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ನೆಲ್ಯಾಡಿ ನಿವಾಸಿ ಜಯ ಸುವರ್ಣ(39), ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹರೆಹಳ್ಳಿಯ ನಿವಾಸಿ ದಿನೇಶ್ (40), ಕಡಬ ತಾಲೂಕಿನ ಕಾರ್ತಿಕ್(28) ಬಂಧಿತ ಆರೋಪಿಗಳು. ಆರೋಪಿಗಳನ್ನು ನೆಲ್ಯಾಡಿಯಲ್ಲಿ ವಶಕ್ಕೆ ಪಡೆಯಲಾಗಿದ್ದು ಎ.4 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಪ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ನಡುವೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ಯಾರೋ ಕಳ್ಳರು ಡಿಸೇಲ್ ಪೈಪ್ ಲೈನ್ ನಲ್ಲಿ ರಂದ್ರ ಕೊರೆದು 2.5 ಇಂಚು ಹೆಚ್ ಡಿಪಿಇ ಪೈಪ್ ಮೂಲಕ ಅಂದಾಜು 12,000 ಲೀ. ಡಿಸೇಲ್ ನ್ನು ಕಳವು ಮಾಡಿದ್ದಾರೆ. ಕಳವಾದ ಡಿಸೇಲ್ ನ ಮೌಲ್ಯ ರೂ 9,60,000 ಎಂದು ಪರಿಗಣಿಸಲಾಗಿದೆ.
ಘಟನೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 800 ಕಾರು, 100 ಲೀಟರ್ ಡೀಸೆಲ್, ಪೈಪುಗಳು, ಡ್ರಿಲಿಂಗ್ ಮೆಷಿನ್, ವೆಲ್ಡಿಂಗ್ ಮೆಷಿನ್, ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ವಸಂತ ಅಚಾರ್ ನೇತೃತ್ವದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.