ನೇಸರ ಫೆ.10: ಏಕಸದಸ್ಯ ಪೀಠದಿಂದ ವಿಸ್ತ್ರತ ಪೀಠಕ್ಕೆ ವರ್ಗಾವಣೆಯಾದ ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಇಂದು ಕೈಗೆತ್ತಿಕೊಂಡಿತು. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಸೋಮವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.
ಶಿಕ್ಷಣ ಸಂಸ್ಥೆಗಳು ತಕ್ಷಣ ಕಾರ್ಯಾರಂಭ ಮಾಡಲಿ. ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಯಾರೊಬ್ಬರೂ ಯಾವುದೇ ಧಾರ್ಮಿಕ ಗುರುತುಗಳನ್ನು (ಹಿಜಾಬು ಮತ್ತು ಶಾಲು) ಬಳಸುವಂತಿಲ್ಲ ಎಂದು ಸೂಚಿಸಿದ ಹೈಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರದಂತೆ ನಿರ್ಬಂಧಿಸಿರುವ ಕ್ರಮ ಹಾಗೂ ಸಮವಸ್ತ್ರ ಸಂಹಿತೆ ಸಂಬಂಧ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಉಡುಪಿಯ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಇತರ ಕೆಲವು ವಿದ್ಯಾರ್ಥಿನಿಯರ ಪರ ಪೋಷಕರು ಸಲ್ಲಿಸಿರುವ 3 ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾ.ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಫೆ.10 ಮಧ್ಯಾಹ್ನ 2.30ಕ್ಕೆ ಆರಂಭಿಸಿತು.ಅರ್ಜಿದಾರರ ಪರ ವಕೀಲರಾದ ಸಂಜಯ ಹೆಗ್ಡೆ,ದೇವದತ್ ಕಾಮತ್ ವಾದ ಆರಂಭಿಸಿದರು.ಪ್ರಾರಂಭದಲ್ಲಿ ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ಅವರು ಪ್ರಕರಣದ ಹಿನ್ನೆಲೆಯನ್ನು ವಿವರಿಸುವಂತೆ ಸೂಚಿಸಿದರು. ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ಅವರು ಘಟನೆಯನ್ನು ಕೋರ್ಟ್ಗೆ ವಿವರಿಸಿದರು. ಸ್ಕಾರ್ಫ್ ಧರಿಸುವುದು ಮೂಲಭೂತ ಹಕ್ಕುಗಳೊಳಗೆ ಬರುತ್ತದೆಯೇ ಎಂಬ ವಿಷಯವನ್ನು ನಾವು ಪರಿಗಣಿಸುತ್ತಿದ್ದೇವೆ. ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯ ಅತ್ಯಗತ್ಯ ಭಾಗವೇ ಎಂಬುದನ್ನು ಸಹ ನಾವು ಪರಿಗಣಿಸುತ್ತಿದ್ದೇವೆ ಎಂದು ಕೋರ್ಟ್ ಹೇಳಿತು. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರದ ಬಗ್ಗೆ ಯಾವುದೇ ವಿಶೇಷ ನಿಬಂಧನೆಗಳಿಲ್ಲ. ಏಕರೂಪದ ಸಂಹಿತೆಯ ಉಲ್ಲಂಘನೆ ಗಾಗಿ ದಂಡ ವಿಧಿಸಲು ಯಾವುದೇ ಅವಕಾಶವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ನಿರ್ವಹಣೆಗೆ ದಂಡಗಳು ಹೆಚ್ಚಾಗಿವೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್ ಹೆಗ್ಡೆ ಹೇಳಿದರು.