ಮಂಗಳೂರು: ಪ್ರಧಾನಿ ಮೋದಿ ಅವರೇ ಆಗಮಿಸಿ, ರೋಡ್ ಶೋ ನಡೆಸುವ ಮೂಲಕ ಪ್ರಚಾರಕ್ಕೆ ನವೋತ್ಸಾಹ ತುಂಬಿದರು. ನಗರದ ಮಧ್ಯೆ ನಡೆದ ರೋಡ್ ಶೋ ಕಾರ್ಯಕರ್ತರಲ್ಲಿ ಉತ್ತೇಜನ ತಂದರೆ ರಾಜಕೀಯದ ಕಣದಲ್ಲೂ ರೋಚಕತೆ ಸೃಷ್ಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಲೇಡಿಹಿಲ್ನಲ್ಲಿರುವ ನಾರಾಯಣಗುರು ವೃತ್ತಕ್ಕೆ 7.36 ಕ್ಕೆ ಆಗಮಿಸಿದರು. ಬೃಹತ್ ಜನಸ್ತೋಮಕ್ಕೆ ಕೈ ಮುಗಿದರು, ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮಾಲಾರ್ಪಣೆ ಹಾಗೂ ಶಾಲು ಹಾಕಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮೋದಿ ಅವರಿಗೆ ಶ್ರೀಕೃಷ್ಣ ದೇವರ ಪ್ರತಿಮೆ ಇರುವ ಪ್ರಭಾವಳಿಯನ್ನು ಸ್ಮರಣಿಕೆ ರೂಪದಲ್ಲಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮೋದಿಯವರಿಗೆ ಪೇಟ ತೊಡಿಸಿ ಗೌರವಿಸಿದರು. ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ಡಾ|ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ರಾಜೇಶ್ ನಾೖಕ್ ಉಳಿಪ್ಪಾಡಿ, ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಮುಖಂಡರಾದ ಕ್ಯಾ.ಗಣೇಶ್ ಕಾರ್ಣಿಕ್, ನಿತಿನ್ ಕುಮಾರ್ ಮುಂತಾದವರಿದ್ದರು.
ರೋಡ್ ಶೋ ವಾಹನವನ್ನೇರಿದ ಪ್ರಧಾನಿಯವರ ಜೊತೆ ಇಬ್ಬರೂ ಅಭ್ಯರ್ಥಿಗಳೂ ಸೇರಿಕೊಂಡರು. ಸರಿಯಾಗಿ 7.45ಕ್ಕೆ ರೋಡ್ ಶೋ ಆರಂಭ ಗೊಂಡಿದ್ದೇ ಜನರಿಂದ ಪುಷ್ಪ ವೃಷ್ಟಿಯೂ ಶುರುವಾಯಿತು. ರೋಡ್ ಶೋ ಆರಂಭದ ಸ್ಥಳವಾಗಿದ್ದರಿಂದ ಲೇಡಿಹಿಲ್ನಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು 5.30 ರ ಸುಮಾರಿಗೇ ಸೇರಿದ್ದರು. ಮಕ್ಕಳು, ವೃದ್ಧರಾದಿಯಾಗಿ ನಾರಾಯಣಗುರು ವೃತ್ತದತ್ತ ಜನರು ಬರತೊಡಗಿದರು. ವೃತ್ತದ ಸುತ್ತಲೂ ಬ್ಯಾರಿಕೇಡ್ ಹಾಕಿ ಜನರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮೋದಿ ಆಗಮನಕ್ಕೂ ಸಾಕಷ್ಟು ಮೊದಲೇ ಭಜನೆ, ವಿಪ್ರರಿಂದ ವೇದಘೋಷ, ಶಂಖಜಾಗಟೆ, ಕೊಂಬು ಕಹಳೆ, ಚಂಡೆ ವಾದನ ನಡೆಯುತ್ತಿತ್ತು.
ಪ್ರಮುಖ ವೃತ್ತವಾದ ಪಿವಿಎಸ್ನಲ್ಲಿ ಬಿಜೆಪಿ ಪ್ರಮುಖರಿಗೆ ವೇದಿಕೆಯನ್ನು ಹಾಕಲಾಗಿತ್ತು. ಬಿಜೆಪಿ ನಾಯಕರು, ಕಾರ್ಯಕರ್ತರು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಾ ಉತ್ಸಾಹ ಕಾತರದಿಂದ ಮೋದಿಯವರನ್ನು ನಿರೀಕ್ಷಿಸುತ್ತಿದ್ದರು. ಒಂದೆಡೆ ನಾಸಿಕ್ ಬ್ಯಾಂಡ್ ಸದ್ದಿಗೆ ಕೆಲವರು ಹೆಜ್ಜೆ ಹಾಕಿದರು. ಇನ್ನೊಂದೆಡೆ ವಯೋಲಿನ್ ಮತ್ತು ಚೆಂಡೆ ವಾದನದಿಂದ ಮತ್ತಷ್ಟು ಉತ್ಸಾಹಿತಗೊಂಡರು. ಬಾಲ ರಾಮನ ವೇಷ ಧರಿಸಿದ್ದ ಬಾಲಕಿ ಯೋರ್ವಳು ಜೈ ಶ್ರೀ ರಾಮ್ ಘೋಷಣೆ ಹಾಕುತ್ತಿದ್ದುದು ನೆರೆದವರ ಗಮನ ಸೆಳೆಯಿತು. ಅಲ್ಲಿದ್ದವರು ಆಕೆಯ ಘೋಷಣೆಗೆ ದನಿ ಸೇರಿಸಿದರು. ಬಿಜೆಪಿ ಬಾವುಟವನ್ನು ಹಿಡಿದು ಘೋಷಣೆ ಗಳನ್ನು ಕೂಗುತ್ತಾ ಬ್ಯಾರಿಕೇಡ್ಗಳ ಬಳಿ ನುಗ್ಗುತ್ತಿದ್ದವರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು. ರಾತ್ರಿ 8.33ರ ವೇಳೆಗೆ ರೋಡ್ ಶೋ ಪಿವಿಎಸ ತಲುಪುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಯಿತು. ಮಹಿಳೆಯರು, ಹಿರಿಯರು ಸೇರಿದಂತೆ ನೆರೆದಿದ್ದವರು ಪುಳಕಿತಗೊಂಡರು. ಆ ಕ್ಷಣವನ್ನು ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿಯಲು ಮುಗಿಬಿದ್ದು ಸಂಭ್ರಮಿಸಿದರು.
ಹದಿನೈದು ಮಂದಿ ಸಾಮಾನ್ಯ ಕಾರ್ಯಕರ್ತರೇ ಪ್ರಧಾನಿ ಮೋದಿ ಅವರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ ವೇಳೆ ಸ್ವಾಗತಿಸಿದ್ದು ವಿಶೇಷ. ಬಿಜೆಪಿ ಬೂತ್ ಅಧ್ಯಕ್ಷರು, ಊರಿನ ಪ್ರಮುಖರು, ಪಕ್ಷದ ಪದಾಧಿಕಾರಿಗಳು ಸೇರಿದ ತಂಡವನ್ನು ಇದಕ್ಕಾಗಿ ರಚಿಸಲಾಗಿತ್ತು. ಇದೇ ರೀತಿ ರೋಡ್ಶೋ ಆರಂಭ ಮತ್ತು ಮುಕ್ತಾಯ ಹಂತದಲ್ಲೂ ಬೂತ್ ಮಟ್ಟದ ಅಧ್ಯಕ್ಷರು, ವಿವಿಧ ಸಮುದಾಯದ ಪ್ರಮುಖರು ಮತ್ತಿತರರೇ ಮೋದಿ ಅವರನ್ನು ಶಕ್ತಿ ಕೇಂದ್ರದ ಪ್ರಮುಖ್, ಸಮಾಜ ಸೇವಕರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು.
ಪ್ರಧಾನಿ ಮೋದಿ ಅವರ ರೋಡ್ ಶೋ ದಾರಿ ಯುದ್ದಕ್ಕೂ ವಿದ್ಯುದ್ದೀಪಾಲಂಕಾರಗೊಳಿಸಲಾಗಿತ್ತು. ಕೆಲವೊಂದು ಖಾಸಗಿ ಕಟ್ಟಡದಲ್ಲೂ ಮಿನಿಯೇಚರ್ ಬಲ್ಬ್ ಕಾಣುತ್ತಿತ್ತು. ಲೇಸರ್ ಲೈಟ್ಗಳನ್ನು ಅಲ್ಲಲ್ಲಿ ಹಾಕಲಾಗಿದ್ದು, ಬಿಜೆಪಿಯ ತಾವರೆ ಕಂಗೊಳಿಸಿತು.
ಬಿಸಿಲಿನ ತಾಪ ಹೆಚ್ಚಿದ್ದ ಹಿನ್ನೆಲೆಯಲ್ಲಿ ತಂಪು ಪಾನೀಯ, ಮಜ್ಜಿಗೆಗೆ ಬೇಡಿಕೆ ಇತ್ತು. ರೋಡ್ ಶೋಗೆ ಆಗಮಿಸುವವರಿಗೆ ನಗರದ ಹಲವು ಜಂಕ್ಷನ್ಗಳ ಸಹಿತ ರಸ್ತೆ ಬದಿಗಳಲ್ಲಿ ಮಜ್ಜಿಗೆ, ನೀರು, ಕಲ್ಲಂಗಡಿ ಜ್ಯೂಸ್ನ ವ್ಯವಸ್ಥೆ ಮಾಡಲಾಗಿತ್ತು.